ದಾವಣಗೆರೆ: ಸೈಬರ್ ಅಪರಾಧ ದೊಡ್ಡ ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಭಾರ ಐಜಿಪಿ ಎಸ್. ರವಿ ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೂರ್ವವಲಯದ ಪ್ರಭಾರ ಐಜಿಪಿ ಆಗಿ ಎಸ್. ರವಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜೀವರಕ್ಷಕ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಈ ಬಗ್ಗೆ ಜನರೇ ಎಚ್ಚೆತ್ತುಕೊಳ್ಳಬೇಕು. ಇದು ಪೊಲೀಸರಿಗೂ ಅನ್ವಯವಾಗುತ್ತದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿ ಎನ್ನುವುದು ನನ್ನ ಕಳಕಳಿಯ ಮನವಿ ಎಂದಿದ್ದಾರೆ.
ಜಿಲ್ಲೆಯು ಶಾಂತಿಪ್ರಿಯ ವಲಯವಾಗಿದೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದೇಶಾದ್ಯಂತ ಇರಾನಿ ಗ್ಯಾಂಗ್ ಸರಗಳ್ಳತನ ಹಾವಳಿ ಹೆಚ್ಚಾಗಿದ್ದು, ಕ್ಯಾಂಪ್ಗಳು ಅಲ್ಲಲ್ಲಿ ಹರಡಿಕೊಂಡಿದೆ. ಈ ಬಗ್ಗೆ ನಮಗೆ ಮಾಹಿತಿ ಇದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.