ದಾವಣಗೆರೆ: ನಾನು ಸಿಎಂ ರೇಸ್‌ನಲ್ಲಿಲ್ಲ. ಅಂತಹ ದೊಡ್ಡ ಹುದ್ದೆಯ ಅವಶ್ಯಕತೆ ನನಗಿಲ್ಲ. ನಾನಿನ್ನೂ ಚಿಕ್ಕವನು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಸಿಎಂ ಸ್ಥಾನ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಸ್ಥಾನವೂ ಬೇಡ ಎಂದು ಹೇಳಿದ್ದೇನೆ. ಇಂಥದ್ರಲ್ಲಿ ಸಿಎಂ ಅಗುವ ಆಸೆ ನನಗಿಲ್ಲ. ಮುಖ್ಯಮಂತ್ರಿ ಪಟ್ಟವೂ ಕೂಡ ಖಾಲಿ ಇಲ್ಲ. ಅಲ್ಲಿ ಕುಳಿತುಕೊಳ್ಳುವ ಅರ್ಹತೆ, ಸಾಮರ್ಥ್ಯ ಕೂಡ ನನಗಿಲ್ಲ ಎಂದರು.
'ಯತ್ನಾಳ್ಗೆ ಬುದ್ಧಿಭ್ರಮಣೆ'
ನಮ್ಮ ವರಿಷ್ಠರು ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಅದ್ರೆ ಮುಖ್ಯಮಂತ್ರಿ ಬದಲಾವಣೆಯಾಗುತ್ತೆ ಅಂತ ಹೇಳುತ್ತಿರುವ ಯತ್ನಾಳ್ಗೆ ಬುದ್ಧಿಭ್ರಮಣೆಯಾಗಿದೆ. ಪ್ರತಿದಿನ ಒಂದೊಂದು ಹೇಳಿಕೆ ನೀಡುವುದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಹೇಳಿದರು.
'ಸಿಎಂ, ರಾಜ್ಯಾಧ್ಯಕ್ಷರ ನಡುವೆ ಮನಸ್ತಾಪವಿಲ್ಲ'
ಸಿಎಂ ಯಡಿಯೂರಪ್ಪ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಧ್ಯೆ ಯಾವುದೇ ಮನಸ್ತಾಪಗಳಿಲ್ಲ. ಅವರದ್ದು ಎಂದು ಹೇಳಲಾಗುತ್ತಿರುವ ಆಡಿಯೋ ಸಹ ನಕಲಿ. ಅವರಿಗೆ ಕಪ್ಪು ಚುಕ್ಕೆ ತರಲು ಕುತಂತ್ರ ಮಾಡಲಾಗುತ್ತಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯುತ್ತದೆ ಎಂದರು.
ಅಭಿವೃದ್ಧಿ ವಿಚಾರವಾಗಿ ಅನುದಾನ ಬಿಡುಗಡೆ
ತಮ್ಮ ಶಾಸಕರಿಗೆ ಮಾತ್ರ ಸಿಎಂ ಅನುದಾನ ಬಿಡುಗಡೆ ಮಾಡುತ್ತಾರೆ ಎಂಬ ವಿಚಾರಕ್ಕೆ, ಏಕೆ ಅನುದಾನ ಬಿಡುಗಡೆ ಮಾಡಬಾರದು?. ಅಭಿವೃದ್ಧಿ ವಿಚಾರವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.