ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಿದರಿಕೆರೆ ಗ್ರಾಮದ ಹೊರವಲಯದಲ್ಲಿ ರಿನ್ಯೂ ಪವರ್ ಪ್ಲಾಂಟ್ ಎಂಬ ಖಾಸಗಿ ಕಂಪನಿ ತನ್ನ ಪವರ್ ಪ್ಲಾಂಟ್ ಹಾಕಲು ರೈತರ ಜಮೀನುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಆರೋಪಿಸಿ ರೈತರು ಪ್ರತಿಭಟನ ನಡೆಸಿದರು.
ಈಗಾಗಲೇ ಅಲ್ಪ ಪರಿಹಾರ ನೀಡಿ ಜಗಳೂರು ಹಾಗೂ ಚಿತ್ರದುರ್ಗ ಭಾಗದಿಂದ ಕಂಬಗಳನ್ನು ಹಾಕಿ ಪವರ್ ಲೈನ್ ಎಳೆಯಲಾಗಿದೆ. ಇದೀಗ ಕಾಮಗಾರಿ ಜಗಳೂರು ತಾಲೂಕಿನ ಬಿದರಿಕೆರೆಗೆ ಬಂದು ನಿಂತಿದೆ. ಆದರೆ, ರೈತರಿಗೆ ಸೂಕ್ತ ಪರಿಹಾರ ನೀಡದ ಕಾರಣ ರೈತರು ಜಮೀನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಆದರೂ ರಿನ್ಯೂ ಕಂಪನಿಯವರು ರೈತರ ಜಮೀನುಗಳಲ್ಲಿ ಕಾಮಗಾರಿ ನಡೆಸುತ್ತಿರುವುದು ರೈತರನ್ನು ಕೆರಳಿಸಿದೆ.
ಇತ್ತೀಚೆಗೆ ಜಮೀನಿನಲ್ಲಿ ಕಂಬಗಳನ್ನು ಅಳವಡಿಸಲು ಮುಂದಾದಾಗ ಉಜ್ಜುನ್ ಗೌಡ ಎಂಬ ರೈತ ತನ್ನ ತಾಯಿಯೊಂದಿಗೆ ಸೇರಿ ಜಮೀನಿನಲ್ಲೇ ವಿಷ ಸೇವಿಸಿದ ಘಟನೆಯೂ ನಡೆದಿದೆ. ಆದರೂ ಅಧಿಕಾರಿಗಳು ರೈತರ ಅಹವಾಲು ಆಲಿಸದೇ ಕಂಪನಿ ಪರವಾಗಿ ನಿಂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಅಖಂಡ ರೈತ ಸಂಘದ ನೇತೃತ್ವದಲ್ಲಿ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ತಾಯಿ ಮೃತದೇಹ ಹೊತ್ತು 4 ಕಿಮೀ ನಡೆದೇ ಸಾಗಿ ಅಂತ್ಯಕ್ರಿಯೆ ನಡೆಸಿದ ಹೆಣ್ಣುಮಕ್ಕಳು