ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹೊಟ್ಟಿಗೇನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖೋಟಾ ನೋಟು ಪತ್ತೆಯಾಗಿವೆ. ಹೊಟ್ಟಿಗೇನಹಳ್ಳಿ ಗ್ರಾಮದಲ್ಲಿ ಕುಬೇರಪ್ಪ ಎಂಬುವವರ ವಾಸದ ಮನೆ ಹಾಗೂ ಕೊಟ್ಟಿಗೆ ಮನೆಯಲ್ಲಿ ಖೋಟಾ ನೋಟುಗಳು ಸಿಕ್ಕಿವೆ. ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಮನೆಯ ಮೇಲೆ ದಾಳಿ ಮಾಡಿ 500 ರೂಪಾಯಿ ಮುಖಬೆಲೆಯ 646 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖೋಟಾ ನೋಟುಗಳ ಒಟ್ಟು ಮೌಲ್ಯ 3,23,000 ರೂ. ಗಳಾಗಿದ್ದು, ಈ ನೋಟುಗಳಲ್ಲಿ RBI ಎನ್ನುವ ಗ್ರೀನ್ ಲೈನ್ ಇದ್ದು, ನಿಜವಾದ ನೋಟಿನಲ್ಲಿ ಈ ಲೈನ್ ಇರದ ಕಾರಣ ಇದು ನಕಲಿ ನೋಟುಗಳು ಎಂದು ಕಂಡು ಬಂದಿದೆ.
ಇನ್ನು ಈ ಖೋಟಾ ನೋಟುಗಳು ಪತ್ತೆಯಾದ ಸ್ಥಳದಲ್ಲಿ ವಾಸವಾಗಿದ್ದ ಕುಬೇರಪ್ಪ ಎಂಬಾತ ಹೊಟ್ಟಿಗೇನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಗ್ರಾಮದ ತೋಟಗಳಲ್ಲಿ ಕೆಲಸ ಮಾಡುತ್ತಿರುತ್ತಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಕುಬೇರಪ್ಪ ನಾಪತ್ತೆಯಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ.
ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ.ಬಸರಗಿ ಅವರು ಕಾರ್ಯಾಚರಣೆ ಮಾಡಿದ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಕಳೆದ ವಾರ ದಾವಣಗೆರೆಯಲ್ಲಿ ಖೋಟಾ ನೋಟು ಮುದ್ರಣ ಜಾಲ ಪತ್ತೆ: ದಾವಣಗೆರೆಲ್ಲಿ ಖೋಟಾ ನೋಟು ಮುದ್ರಣ ಪ್ರಕರಣ ಕಳೆದ ವಾರವಷ್ಟೇ ಬೆಳಕಿಗೆ ಬಂದಿತ್ತು. ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಯಲ್ಲಮ್ಮ ನಗರದಲ್ಲಿ ಡಿಸಿಆರ್‌ಬಿ ಪೊಲೀಸರು ಬಂಧಿಸಿದ್ದರು.
ಎಸ್. ಅಶೋಕ ಹಾಗೂ ಅರಸನಾಳು ಹಾಲೇಶಿ ಬಂಧಿತರು. ಇವರು ದಾವಣಗೆರೆಯ ಯಲ್ಲಮ್ಮನಗರದ ಬಳಿ ಕಲರ್ ಜೆರಾಕ್ಸ್ ಮಷಿನ್‌ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ಆರೋಪಿಗಳನ್ನ ಬಂಧಿಸಿ, ಬಂಧಿತರಿಂದ 1,20,700 ಮೌಲ್ಯದ ಖೋಟಾ ನೋಟು ಹಾಗೂ ಒಂದು ಕಲರ್ ಜೆರಾಕ್ಸ್ ಮಷಿನ್ ವಶಕ್ಕೆ ಪಡೆದಿದ್ದರು. ದಾವಣಗೆರೆ ಡಿಸಿಆರ್‌ಬಿ ಘಟಕದ ಪೊಲೀಸ್ ಉಪ ಅಧೀಕ್ಷಕ ಬಿ.ಎಸ್.ಬಸವರಾಜ್ ಹಾಗೂ ಡಿಸಿಆರ್‌ಬಿ ಘಟಕದ ಸಿಬ್ಬಂದಿ ದಾಳಿ ಮಾಡಿ ಪ್ರಕರಣ ಭೇದಿಸಿದ್ದರು.
ಒರಿಜಿನಲ್ ನೋಟುಗಳ ಸ್ಕ್ಯಾನ್, ಪ್ರಿಂಟ್: ಆರೋಪಿಗಳು ನೋಡಲು ಹಳ್ಳಿಗರಂತೆ ಕಾಣಿಸುತ್ತಾರೆ. ಯಲ್ಲಮ್ಮ ನಗರದ 4ನೇ ಮೇನ್ ರಸ್ತೆ, 6ನೇ ಕ್ರಾಸ್ನ ತೆಲಗಿ ಶೇಖರಪ್ಪನವರ ಮನೆ ಸಮೀಪ ದಂಧೆ ನಡೆಸುತ್ತಿದ್ದರು. 100 ರೂ. ಮೌಲ್ಯದ 26 ನೋಟುಗಳು, 200 ರೂ. ಮೌಲ್ಯದ 133 ನೋಟುಗಳು ಹಾಗೂ 500 ರೂ. ಮೌಲ್ಯದ 183 ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.
ಆರೋಪಿಗಳು ಕಲರ್ ಜೆರಾಕ್ಸ್ ಮಷಿನ್ ಇಟ್ಟುಕೊಂಡು ಬಾಂಡ್ ಪೇಪರ್ನಲ್ಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡುತ್ತಿದ್ದರು. ಅವುಗಳ ಮೇಲೆ ಪೆನ್ಸಿಲ್ನಲ್ಲಿ ಅಸಲಿ ನೋಟಿನ ಹಾಗೇ ಕಾಣುವಂತೆ ಮಾರ್ಕ್ ಮಾಡುತ್ತಿದ್ದರು. ಈ ನೋಟುಗಳನ್ನು ಯಾರೇ ನೋಡಿದರೂ ನಕಲಿ ನೋಟುಗಳೆಂಬ ಅನುಮಾನವೇ ಬರುತ್ತಿರಲಿಲ್ಲ.
ಅಷ್ಟರ ಮಟ್ಟಿಗೆ ಖೋಟಾ ನೋಟು ಸೃಷ್ಟಿಸುತ್ತಿದ್ದರು. ಇವರು ಮೂಲ (ಒರಿಜಿನಲ್) ನೋಟುಗಳನ್ನೇ ತೆಗೆದುಕೊಂಡು ಸ್ಕ್ಯಾನ್ ಮಾಡಿ ಪ್ರಿಂಟ್ ಮಾಡುತ್ತಿದ್ದರು ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದರು. ಈ ಬೆನ್ನಲ್ಲೇ ಇದೀಗ ಮತ್ತೊಂದು ಖೋಟಾ ನೋಟು ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
(ಇದನ್ನೂ ಓದಿ: ಕಲರ್ ಪ್ರಿಂಟರ್ನಿಂದಲೇ ಖೋಟಾ ನೋಟು ಮುದ್ರಣ: ಇಬ್ಬರ ಬಂಧನ)