ದಾವಣಗೆರೆ: ಧಾರವಾಡದಲ್ಲಿ ನಡೆದಿದ್ದ ಅಪಘಾತದಲ್ಲಿ ನಲವತ್ತು ವರ್ಷದ 9 ಸ್ನೇಹಿತೆಯರು ಸಾವಿನಲ್ಲೂ ಒಂದಾದ ದುರಂತಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ರಾಷ್ಟ್ರೀಯ ಹೆದ್ದಾರಿ ಚಿಕ್ಕದಾಗಿರುವುದೇ ಆ ಕರಾಳ ಘಟನೆಗೆ ಕಾರಣ ಎಂದು ಆಡಳಿತ ವ್ಯವಸ್ಥೆಯ ವೈಫಲ್ಯಗಳನ್ನು ಎತ್ತಿ ತೋರಿಸಲು ಮೃತರ ಸಂಬಂಧಿಕರು ನಿರ್ಧರಿಸಿದ್ದಾರೆ.
ಇದನ್ನೂ ಓದಿ...ಪ್ರವಾಸಕ್ಕೆ ಹೊರಟವರ ಬದುಕು ದಾರುಣ ಅಂತ್ಯ: ಸಾವಲ್ಲೂ ಒಂದಾಯ್ತು 40 ವರ್ಷದ ಗೆಳೆತನ
ಸರ್ಕಾರದ ವೈಫಲ್ಯವನ್ನು ತೋರಿಸಿ ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಲು ಅಪಘಾತ ನಡೆದ ಸ್ಥಳದಲ್ಲಿ ಪ್ರತಿಭಟಿಸಲು ವೈದ್ಯರ ತಂಡ ಚಿಂತನೆ ನಡೆಸಿದೆ. ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ (ಇಟ್ಡಿಗಟ್ಟಿ ಗ್ರಾಮದ ಬಳಿ) ಮಿನಿ ಬಸ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಒಟ್ಟು 11 ಮಂದಿ ಮೃತಪಟ್ಟಿದ್ದರು. ಅದರಲ್ಲಿ 9 ಸ್ನೇಹಿತೆಯರು, ಇಬ್ಬರು ಚಾಲಕರು ಅಸುನೀಗಿದ್ದರು.
ಫೆಬ್ರವರಿ 6ರಂದು ದಾವಣಗೆರೆ ಐಎಂಎ ಹಾಲ್ನಿಂದ ಆರಂಭವಾಗಲಿರುವ ಪ್ರತಿಭಟನಾ ಜಾಥಾ ಧಾರವಾಡದ ಅಪಘಾತ ಸ್ಥಳಕ್ಕೆ (ಇಟ್ಟಿಗಟ್ಟಿ ಬಳಿ) ಸೇರಿ, ಸರ್ಕಾರದ ಕಣ್ಣು ತೆರೆಸಲು ಮೌನ ಪ್ರತಿಭಟನೆ ನಡೆಸಲಿದೆ. ಇಟ್ಟಿಗಟ್ಟಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಬೇಕೆಂದು ಒತ್ತಾಯಿಸಲಿದೆ. ಮೃತರ ಕುಟುಂಬದ ಸದಸ್ಯರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಮುಂದಿನ ದಿನಗಳಲ್ಲಿ ಅನಾಹುತಗಳು ಸಂಭವಿಸದಂತೆ ಸುಸಜ್ಜಿತ ರಸ್ತೆ ನಿರ್ಮಿಸಿ ಎಂದು ಆಗ್ರಹಿಸಲಾಗುತ್ತದೆ.
ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಕೆಲ ಪತಿಯಂದಿರು, ಮಕ್ಕಳು, ತಾಯಂದಿರು ಹಾಗೂ ವೈದ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಮೃತರ ಆತ್ಮಕ್ಕೆ ಶಾಂತಿ ಕೋರಲಿದ್ದಾರೆ. ಈ ಪ್ರತಿಭಟನೆ ಯಾವುದೇ ಪಕ್ಷಗಳ ಪರ, ವಿರುದ್ಧ ಅಲ್ಲ ಎಂದು ವೈದ್ಯರ ತಂಡ ಸ್ಪಷ್ಟಪಡಿಸಿದೆ. ಕಿರಿದಾದ ಈ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯುವುದೇ ಪ್ರತಿಭಟನೆ ಉದ್ದೇಶ.