ದಾವಣಗೆರೆ: ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಅಕ್ರಮ ಮತದಾರ ಪಟ್ಟಿ ಆರೋಪ ವಿಚಾರವಾಗಿ ಕಾನೂನು ಪ್ರಕಾರ ಮತದಾನ ಪಟ್ಟಿಯಿಂದ ಏಕಾಏಕಿ ತೆಗೆಯಲು ಬರುವುದಿಲ್ಲ. ಮತದಾನಕ್ಕೆ ಅವಕಾಶ ಇದೆ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಡಿಸಿ ವಿರುದ್ಧ ಘೋಷಣೆ ಕೂಗಿದರು.
ಅಕ್ರಮ ಮತದಾರ ಪಟ್ಟಿ ಆರೋಪ ವಿಚಾರವಾಗಿ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್, ಬುಧವಾರ (ಫೆ.19)ರಂದು ಚುನಾವಣೆ ಇರುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲವೆಂದು ವಿಚಾರಣೆಯನ್ನು ಫೆ. 24 ಕ್ಕೆ ಮುಂದೂಡಿದೆ. ಇದಕ್ಕೆ ಡಿಸಿ ಮಹಾಂತೇಶ್ ಬೀಳಗಿ ಸ್ಪಷ್ಟನೆ ನೀಡುವುದಾಗಿ ಹೇಳಿ ಸತಾಯಿಸಿದ ಹಿನ್ನಲೆ, ಕಾಂಗ್ರೆಸ್ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾಧ್ಯಮಗೋಷ್ಟಿ ನಡೆಸಿದ ಡಿಸಿ, ಕಾನೂನು ಪ್ರಕಾರ ಮತದಾನ ಪಟ್ಟಿಯಿಂದ ಏಕಾಏಕಿ ತೆಗೆಯಲು ಬರುವುದಿಲ್ಲ ಹೀಗಾಗಿ 62 ಮತದಾರರು ಮತದಾನಕ್ಕೆ ಅವಕಾಶ ಇದೆ ಎಂದರು. ಹೀಗೆ ಹೇಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಡಿಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿಯ 12 ಎಂಎಲ್ಸಿ ಗಳು ದಾವಣಗೆರೆ ನಗರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದರು. ವಿಧಾನಪರಿಷತ್ ಸದಸ್ಯರಿಗೆ ಪಾಲಿಕೆಯಲ್ಲಿ ಮತದಾನದ ಹಕ್ಕು ನೀಡದಂತೆ ಕಾಂಗ್ರೆಸ್ ಪಾಲಿಕೆ ಚುನಾಯಿತ ಸದಸ್ಯರು ಹೈಕೋರ್ಟ್ ನಲ್ಲಿ ಮನವಿ ಮಾಡಿದ್ದರು. ಈ ಹಿನ್ನಲೆ ಸೋಮವಾರ ಹಿರಿಯ ಅಧಿಕಾರಿ ಹರ್ಷಾ ಗುಪ್ತ ಅವರು ಮತದಾರ ಪಟ್ಟಿ ಪರಿಶೀಲನೆ ನಡೆಸಿದ್ದರು. ಕೋರ್ಟ್ ಆದೇಶ ಹಿನ್ನಲೆ ಜಿಲ್ಲಾಧಿಕಾರಿ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿತ್ತು. ಅದರಂತೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಡಿಸಿ 62 ಮತದಾರರಿಗೂ ಅವಕಾಶ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆ 62 ಸದಸ್ಯ ಬಲದ ಪಾಲಿಕೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಎಂಎಲ್ ಸಿ ಗಳ ಮತಗಳು ಬಿಜೆಪಿಗೆ ತಾತ್ಕಾಲಿಕ ಟಾನಿಕ್ ನಂತೆ ಸಿಕ್ಕಿದ್ದು, ಮೇಯರ್ ಗದ್ದುಗೆ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.