ದಾವಣಗೆರೆ: ಚನ್ನಗಿರಿ ತಾಲೂಕಿನ ಶಾಂತಿಸಾಗರ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದ್ದು, ಸೂಳೆಕೆರೆಯ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಕೃಷಿಗೆ ಬಳಸಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಭೀಕರ ಬರ ಮತ್ತು ಮುಂಗಾರು ಮಳೆ ಅಭಾವದ ಹಿನ್ನೆಲೆ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದ್ದು, ತುಂಗಭದ್ರಾ ನದಿ ಪಾತ್ರದಲ್ಲಿ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಈ ಆದೇಶ ಹೊರಡಿಸಿದ್ದಾರೆ. ಕಂದಾಯ ಇಲಾಖೆ, ನೀರಾವರಿ ಇಲಾಖೆ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಪೂರೈಕೆ ಕುರಿತು ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಿದ್ದಾರೆ.
ಹರಿಹರ ಮತ್ತು ಹೊನ್ನಾಳಿ ತಾಲೂಕುಗಳ ಬಹುಗ್ರಾಮ ನದಿ ನೀರು ಸರಬರಾಜು ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ತುಂಗಭದ್ರಾ ನದಿಗೆ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ನದಿಯ ಪಾತ್ರದಲ್ಲಿ ವಾಸಿಸುವ ಜನರು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಕುಡಿಯುವ ನೀರಿನ ಹೊರತಾಗಿ ಇತರೆ ಉದ್ದೇಶಗಳಿಗೆ ಬಳಕೆ ಮಾಡಬಾರದು. ಆದರೆ ಕೃಷಿಗಾಗಿ ಈ ನೀರು ಬಳಕೆಯಾಗುತ್ತಿರುವ ಕುರಿತಂತೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ನದಿಯ ಪಾತ್ರದಲ್ಲಿರುವ ಅನಧಿಕೃತ ಪಂಪ್ ಸೆಟ್ಗಳನ್ನು ತೆರವುಗೊಳಿಸಬೇಕು. ಪಂಪ್ ಸೆಟ್ಗಳಿಗೆ ಪೂರೈಸಲಾಗುತ್ತಿರುವ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.
ನದಿಯ ನೀರನ್ನು ಅಕ್ರಮವಾಗಿ ಅನಧಿಕೃತವಾಗಿ ಪಂಪ್ ಸೆಟ್ ಮೂಲಕ ಎತ್ತುವವರನ್ನು ಪತ್ತೆ ಹಚ್ಚಲು ಅಧಿಕಾರಿಗಳ ತಂಡವನ್ನು ತಕ್ಷಣವೇ ರಚಿಸಬೇಕು. ಈ ತಂಡಗಳು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ಕಾನೂನು ಬಾಹಿರವಾಗಿ ನದಿ ಪಾತ್ರದಿಂದ ಯಾರೇ ನೀರು ಎತ್ತಿದರೂ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜೂನ್ 29ರವರೆಗೆ ಹೊನ್ನಾಳಿ ಮತ್ತು ಹರಿಹರ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ತುಂಗಭದ್ರಾ ನದಿ ಪಾತ್ರದ ಎಡ-ಬಲ ದಂಡೆಗಳ ಮೇಲೆ ಪಂಪ್ ಸೆಟ್ ಹಾಗೂ ಟ್ಯಾಂಕರ್ಗಳ ಮೂಲಕ ನದಿಯ ನೀರನ್ನು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನದಿ ಸುತ್ತಮುತ್ತ 500 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಜೊತೆಗೆ ಜಾನುವಾರುಗಳನ್ನು ನದಿಗೆ ಇಳಿಸುವಂತಿಲ್ಲ. ಈ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಡಿಸಿ ಘೋಷಿಸಿದ್ದಾರೆ.