ದಾವಣಗೆರೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಮಾತ್ರವಲ್ಲ. ಇಡೀ ಸರ್ಕಾರವೇ ಹಳ್ಳಿಗಳ ಕಡೆಗೆ ಹೋಗಬೇಕು ಎಂಬುದು ನಮ್ಮ ಸಂಕಲ್ಪ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಲಾಷೆ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ಕೊಡುವುದು ನಮ್ಮ ಉದ್ದೇಶವಾಗಿದೆ. ಎಲ್ಲ ರೀತಿ ಪ್ರಮಾಣ ಪತ್ರಗಳು ಗ್ರಾಮ ಪಂಚಾಯಿತಿಗಳಲ್ಲಿ ಸಿಗುವಂತೆ ಮಾಡಲಾಗುವುದು. ಜನವರಿ 26ಕ್ಕೆ 'ಜನರ ಮನೆ ಬಾಗಿಲಿಗೆ ಸರ್ಕಾರ' ಎಂಬ ಕಾರ್ಯಕ್ರಮ ಆರಂಭವಾಗಲಿದೆ ಎಂದರು.
ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ:
ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ. 180ಕ್ಕೂ ಹೆಚ್ಚು ಐಟಿಐಗಳನ್ನ ಆರಂಭಿಸಲಾಗುವುದು. ಜತೆಗೆ ಹೊಸ ಶಿಕ್ಷಣದ ನೀತಿ ಜಾರಿಗೆ ಬರಲಿದೆ. ವಿಶೇಷವಾಗಿ ಗುಣಮಟ್ಟದ ಶಿಕ್ಷಣ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಹಳ್ಳಿಯ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತವೆ.
ಗಾಂಧಿ ಕಂಡ ರಾಮ ರಾಜ್ಯ ಕನಸು ನನಸಾಗಬೇಕು. ಗ್ರಾಮ ಸ್ವರಾಜ್ಯ ಮಾಡುವುದು ನಮ್ಮ ಸರ್ಕಾರದ ಸಂಕಲ್ಪ. ಒಂದೇ ವರ್ಷದಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ ಮನೆಗಳನ್ನ ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಎಸ್ವೈ ಹಾನಗಲ್, ಸಿಂದಗಿ ಉಪಚುನಾವಣೆ ಪ್ರಚಾರಕ್ಕೆ ಬರುತ್ತಾರೆ: ಬೊಮ್ಮಾಯಿ