ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿರುವ ಕಾಗಿನೆಲೆ ಶಾಖಾ ಮಠಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಭೇಟಿ ನೀಡಿ ಶ್ರೀಯವರ ಆಶೀರ್ವಾದ ಪಡೆದರು.
ನೂತನ ಸಚಿವರಾದ ಬಳಿಕ ಜನಾಶೀರ್ವಾದ ಸಮಾವೇಶ ನಡೆಸುತ್ತಿರುವ ನಾರಾಯಣಸ್ವಾಮಿ ಅವರು ಇಂದು ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ, ಕುರುಬ ಸಮುದಾಯದ ಎಸ್ಟಿ ಹೋರಾಟದ ಬಗ್ಗೆ ಚರ್ಚೆ ನಡೆಸಿದ ಅವರು ರಾಜ್ಯ ಸರ್ಕಾರ ವರದಿ ನೀಡಿದ ಬಳಿಕ ಕೇಂದ್ರ ಮಟ್ಟದಲ್ಲಿ ಸಹಾಯ ಮಾಡಿ ಎಂದು ಸಚಿವರಲ್ಲಿ ಕಾಗಿನೆಲೆ ಶ್ರೀ ಮನವಿ ಮಾಡಿದರು.
ಇದನ್ನೂ ಓದಿ: ಪೊಲೀಸರನ್ನು ಅಮಾನತುಗೊಳಿಸಿದ ವಿಚಾರ ತಿಳಿದಿಲ್ಲ: ಕೇಂದ್ರ ಸಚಿವ ಭಗವಂತ ಖೂಬಾ
ಸ್ವಾಮೀಜಿ ಅವರ ಮನವಿಗೆ ಸಚಿವರ ಸಹಮತ ವ್ಯಕ್ತಪಡಿಸಿದರು. ಈ ಹಿಂದೆ ರಾಜ್ಯದಲ್ಲಿ ಸಮಾಜಕಲ್ಯಾಣ ಇಲಾಖೆ ಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದೀರಿ. ಈಗ ಕೇಂದ್ರ ಸರ್ಕಾರದಲ್ಲೂ ಒಳ್ಳೆಯ ಕೆಲಸ ಮಾಡಿ ಎಂದು ಶುಭ ಹಾರೈಸಿದರು. ಈ ವೇಳೆ ಸಂಸದ ಜಿ.ಎಂ. ಸಿದೇಶ್ವರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವಿರೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಶಿವಯೋಗಿಸ್ವಾಮಿ ಭಾಗಿಯಾಗಿದ್ದರು.