ದಾವಣಗೆರೆ: ದೇವಾಲಯಗಳ ಹೆಸರಿನಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ, ಕಾಂಗ್ರೆಸ್ಗೆ ಇದ್ದಕ್ಕಿದ್ದಂತೆ ಹಿಂದುಗಳ ಮೇಲೆ ಪ್ರೀತಿ ಬಂದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಂಜನಗೂಡಿನಲ್ಲಿ ಅಧಿಕಾರಿಗಳು ಅತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಾಲಯ ತೆರವು ಮಾಡಬೇಕಿತ್ತು ಎಂದರು.
ಕಾಂಗ್ರೆಸ್ನಲ್ಲಿ ಮಾತ್ರ ನಿರುದ್ಯೋಗಿಗಳಿದ್ದಾರೆ:
ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ದೇಶದ ಪ್ರತಿಯೊಬ್ಬರು ಸಂಭ್ರಮದಿಂದ ಆಚರಿಸಿದರು. ಆದ್ರೆ ಕಾಂಗ್ರೆಸ್ ನಿರುದ್ಯೋಗ ದಿನಾಚರಣೆ ಆಚರಣೆ ಮಾಡಿದೆ. ಕಾಂಗ್ರೆಸ್ನಲ್ಲಿ ಮಾತ್ರ ನಿರುದ್ಯೋಗಿಗಳು ಇದ್ದಾರೆ, ಮುಂದೆ ಬರುವ ಎಲ್ಲ ಚುನಾವಣೆಗಳಲ್ಲಿ ಹೆಸರಿಲ್ಲದೇ ಕಾಂಗ್ರೆಸ್ ಹೋಗುತ್ತದೆ ಎಂದು ಭವಿಷ್ಯ ನುಡಿದರು.
ಕೋರ್ ಕಮಿಟಿ ಸಭೆ:
ಹಾನಗಲ್ ಹಾಗು ಸಿಂದಗಿ ಉಪಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದೆವು. ಮೋದಿಯವರ ಅಭಿವೃದ್ಧಿ ಕೆಲಸಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸುವುದು ನಮ್ಮ ಗುರಿ ಎಂದು ಹೇಳಿದರು. ಮಾಜಿ ಸಿಎಂ ಯಡಿಯೂರಪ್ಪ ಅವರು ಪಕ್ಷ ಕಟ್ಟಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸ್ಪಷ್ಟ ಬಹುಮತದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರವಾಸ ಮಾಡಲಿದ್ದಾರೆ ಎಂದು ಪುತ್ರ ಬಿ ವೈ ವಿಜಯೇಂದ್ರ ಹೇಳಿದರು.
ಗುಜರಾತ್ ಮಾದರಿ ಸಚಿವ ಸಂಪುಟ ರಚನೆಗೆ ಬೆಂಬಲ:
ಗುಜರಾತ್ ಮಾದರಿ ಸಚಿವ ಸಂಪುಟ ರಚನೆಗೆ ಬಿ.ವೈ. ವಿಜಯೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಸಾಥ್ ನೀಡಿದ ಬಿ.ವೈ ವಿಜಯೇಂದ್ರ ರಾಜ್ಯದಲ್ಲೂ ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದೇ. ಆ ನಿಟ್ಟಿನಲ್ಲಿ ರೇಣುಕಾಚಾರ್ಯ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅವರ ಹೇಳಿಕೆಯಲ್ಲಿ ದುರುದ್ದೇಶವಿಲ್ಲ ಎಂದು ತಿಳಿಸಿದರು.