ದಾವಣಗೆರೆ: ಯಾವುದೋ ಒಂದು ತಪ್ಪಿನಿಂದ ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಒಬ್ಬ ನಾಸ್ತಿಕವಾದಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ನಕಲಿ ಹಿಂದೂ ವಾದಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವೀರಶೈವ ಲಿಂಗಾಯಿತ ಸಮಾಜ ಒಡೆದವರು. ದೇವಸ್ಥಾನ ನಾಶ ಮಾಡಿದ ಟಿಪ್ಪು ಜಯಂತಿ ಆಚರಿಸಿ, ಸಂತಸ ಪಟ್ಟವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನಗಳಿಗೆ ಅತೀ ಹೆಚ್ಚು ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಸುಪ್ರಿಂಕೋರ್ಟ್ ತೀರ್ಪಿನಂತೆ ದೇವಸ್ಥಾನ ತೆರವು ಆಗಿದೆ. ಅಧಿಕಾರಿಗಳಿಂದ ತಪ್ಪಾಗಿದೆ. ಸಿಎಂ ನಿರ್ಧಾರ ಮಾಡಿದ್ದಾರೆ. ಮುಂದೆ ಯಾವ ದೇವಸ್ಥಾನವೂ ತೆರವು ಆಗಲ್ಲ. ಕೋರ್ ಕಮಿಟಿಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ಮಾಡ್ತೇವೆ ಎಂದರು.
ಕಾರ್ಯಕಾರಣಿ ಸಭೆ:
ದಾವಣಗೆರೆಯಲ್ಲಿ ವ್ಯವಸ್ಥಿತವಾಗಿ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಮುಂದಿನ ಮೂರು ತಿಂಗಳ ಕಾರ್ಯ ಯೋಜನೆ ಚರ್ಚೆ ನಡೆಯುತ್ತದೆ. ಸಂಘಟನಾತ್ಮಾಕ ವಿಷಯಗಳ ಚರ್ಚೆ ಕೂಡ ಮಾಡಲಾಗುತ್ತದೆ. ಜಿ.ಪಂ, ತಾ.ಪಂ, ಬಿಬಿಎಂಪಿ, ಎಂಎಲ್ಎ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತೆ ಎಂದರು.
'ನೋ ರಿಪೀಟ್ ಸಚಿವ ಸಂಪುಟ' ರಚನೆಯಾಗಬೇಕು:
ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾದರೆ ಒಳ್ಳೆಯದು ಎಂಬುದು ಎಲ್ಲ ಶಾಸಕರ ಅಭಿಪ್ರಾಯ. ಗುಜರಾತ್ ಮಾದರಿ ಅನುಸರಿಸಿದರೆ ಎಲ್ಲ ಅರ್ಹ ಶಾಸಕರಿಗೂ ಸಚಿವ ಸ್ಥಾನದ ಅವಕಾಶ ಸಿಗುತ್ತದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಹೊಸ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ರಾಜ್ಯದಲ್ಲಿ ಗುಜರಾತ್ ಮಾದರಿಯ 'ನೋ ರಿಪೀಟ್ ಸಚಿವ ಸಂಪುಟ' ರಚನೆಯಾಗಬೇಕು. ಇದು ನನ್ನೊಬ್ಬನ ಅಭಿಪ್ರಾಯ ಅಲ್ಲ, ಎಲ್ಲ ಶಾಸಕರ ಅಭಿಪ್ರಾಯವಾಗಿದೆ ಎಂದರು.
ಮೈಸೂರಿನಲ್ಲಿ ದೇವಸ್ಥಾನ ತೆರವು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಹಿಂದುತ್ವದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದಲ್ಲಿದ್ದಾಗ ಕೋಮು ಗಲಭೆಗಳು ಆಗಿವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದೂ - ಮುಸ್ಲಿಮರು ಅನ್ಯೋನ್ಯತೆಯಿಂದ ಇದ್ದಾರೆ ಎಂದರು.
ಲಿಂಗಾಯತ ವೀರಶೈವ ಎಂದು ಒಡೆದು ಜಗಳ ತಂದಿದ್ದೀರಿ. ಅವರ ಹಾಗೇ ಬುರ್ಕಾ, ಟೋಪಿ ಹಾಕಿ ನಮಾಜ್ ಮಾಡಿ ನಾಟಕ ಆಡೋದಿಲ್ಲ. ಮಧ್ಯರಾತ್ರಿ ಸ್ವಾಮೀಜಿಗಳ ಕಾಲಿಗೆ ಬೀಳ್ತಾರೆ. ಬೆಳಗ್ಗೆ ಬಂದು ಧರ್ಮ ಒಡೆಯುವ ಕೆಲಸ ಮಾಡುತ್ತಾರೆ ಎಂದರು.