ರಾಣೇಬೆನ್ನೂರು: ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡರ ಮನೆಯ ಮೇಲೆ ನಡೆದ ಐಟಿ ದಾಳಿಯಲ್ಲಿ ಅಧಿಕಾರಿಗಳಿಗೆ ಎರಡು ಜೊತೆ ಹಳೇ ಚಪ್ಪಲಿ ಸಿಕ್ಕಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬಕಾರಿ ಮತ್ತು ಐಟಿ ಅಧಿಕಾರಿಗಳಿಗೆ ನಮ್ಮ ಮನೆಯಲ್ಲಿ ಎರಡು ಹಳೆಯ ಚಪ್ಪಲಿ ಸಿಕ್ಕಿವೆ. ಅವರು ಆ ಹಳೇ ಚಪ್ಪಲಿಗಳನ್ನೇ ತೆಗೆದುಕೊಂಡು ಹೋಗಿದ್ದಾರೆ ಎಂದು ಲೇವಡಿ ಮಾಡಿದರು. ಅಬಕಾರಿ ಮತ್ತು ಐಟಿ ಅಧಿಕಾರಿಗಳಿಗೆ ಮತ್ತೊಮ್ಮೆ ದಾಳಿಗೆ ಆಹ್ವಾನ ನೀಡುತ್ತೇನೆ. ಕೋಳಿವಾಡರ ಬಳಿ ಚುನಾವಣೆಗೆ ದುಡ್ಡಿಲ್ಲ. ನಾನು ನನ್ನ ಸ್ನೇಹಿತರ ಬಳಿ ಸಾಲ ಮಾಡಿಕೊಂಡು ಎಲೆಕ್ಷನ್ ಮಾಡ್ತಾ ಇದ್ದೀನಿ ಎಂದು ಸ್ಪಷ್ಟಪಡಿಸಿದರು.
ರಾಣೆಬೆನ್ನೂರಿನಲ್ಲಿ ನಡೆಯುವ ಉಪಚುನಾವಣೆಗೆ ಪಕ್ಕದ ರಾಜ್ಯದ ಪೊಲೀಸರನ್ನ ಬಿಟ್ಟು ಗುಜರಾತ್ ಪೊಲೀಸರನ್ನು ಬಳಸಿಕೊಳ್ಳಲಾಗಿದೆ. ಪೊಲೀಸರನ್ನು ಕೋಳಿವಾಡರ ಮನೆ ಕಡೆ ಕಳುಹಿಸಿ ಬಿಜೆಪಿ ನಾಯಕರು ರಾತ್ರಿ ಹಣ ಹಂಚಿದ್ದಾರೆ ಎಂದರು. ಹಣ ಹಂಚೋದಕ್ಕೋಸ್ಕರ ಆಡಳಿತ ಪಕ್ಷ ಪೊಲೀಸರನ್ನು ಡೈವರ್ಟ್ ಮಾಡಿ, ಮಧ್ಯರಾತ್ರಿ ಮಲಗಿದ್ದ ಸಮಯದಲ್ಲಿ ರೇಡ್ ಮಾಡಿದ್ದಾರೆ. ಬಿಜೆಪಿ ಪಕ್ಷ ದ್ವೇಷದ ರಾಜಕಾರಣ ಮಾಡಿದ್ದು, ಕೋಳಿವಾಡರು ಗೆಲುವು ಸಾಧಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.