ದಾವಣಗೆರೆ : ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ದಾವಣಗೆರೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಘಟನೆ ನಡೆಯಿತು.
ಹರಿಹರ ತಾಲೂಕಿನ ದುಗ್ಗತ್ತಿ ಸಕ್ಕರೆ ಕಾರ್ಖಾನೆ ಹಾಗೂ ದಾವಣಗೆರೆ ತಾಲೂಕಿನ ಆನೆಕೊಂಡ ಸಮೀಪದ ಕಲ್ಲೇಶ್ವರ ರೈಸ್ ಮಿಲ್‌ಗೆ ದರ್ಶನ್ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ನಟ ದರ್ಶನ್ ಜೊತೆ ಶಾಮನೂರು ಶಿವಶಂಕರಪ್ಪರ ಪುತ್ರ ಹಾಗೂ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕಾಣಿಸಿಕೊಂಡಿರುವುದು ವಿಶೇಷ.
ಕುದುರೆ ನೋಡಲು ಬಂದಿದ್ದಾರಾ ದರ್ಶನ್?: ಪ್ರಾಣಿಪ್ರಿಯರಾದ ದರ್ಶನ್ ಬೆಣ್ಣೆನಗರಿಗೆ ಕುದುರೆ ನೋಡಲು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆನೆಕೊಂಡದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ 25ಕ್ಕೂ ಹೆಚ್ಚು ಕುದುರೆಗಳಿವೆ. ಈ ಪೈಕಿ ಒಂದನ್ನು ಖರೀದಿಸುವ ಸಲುವಾಗಿ ಇಲ್ಲಿಗೆ ದರ್ಶನ್ ಬಂದಿದ್ದಾರೆ ಎಂದು ಅವರ ಆಪ್ತ ವಲಯದಿಂದ ಈಟಿವಿ ಭಾರತಕ್ಕೆ ಮಾಹಿತಿ ಲಭಿಸಿದೆ.
ಸಾಮಾಜಿಕ ಅಂತರ ಮರೆತ ಅಭಿಮಾನಿಗಳು : ದರ್ಶನ ಭೇಟಿ ವೇಳೆ ಅಪಾರ ಅಭಿಮಾನಿಗಳು ಅವರನ್ನ ನೋಡಲು ಮುಗಿಬಿದ್ದಿದ್ದರು. ಈ ವೇಳೆ ದರ್ಶನ್ ಮಾಸ್ಕ್ ಧರಿಸಿರಲಿಲ್ಲ. ಇನ್ನು, ಅಭಿಮಾನಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ದಾವಣಗೆರೆಯಲ್ಲಿ ಸೋಂಕು ದಿನೇದಿನೆ ಹೆಚ್ಚಾಗುತ್ತಿದೆ. ಆದರೆ, ಅಭಿಮಾನಿಗಳು ಮುಗಿಬಿದ್ದ ಕಾರಣ ತಕ್ಷಣವೇ ದರ್ಶನ್, ಅಭಿಮಾನಿಗಳಿಗೆ ಕೈಬೀಸಿ ಸ್ಥಳದಿಂದ ತೆರಳಿದರು. ದರ್ಶನ್ ಜೊತೆ ಹಾಸ್ಯನಟ ಚಿಕ್ಕಣ್ಣ ಕೂಡ ಕಾಣಿಸಿಕೊಂಡಿದ್ದಾರೆ.
ದರ್ಶನ್ ಜತೆ ಅಂಬಿ ಆಪ್ತ ಎಸ್ ಎಸ್ ಮಲ್ಲಿಕಾರ್ಜುನ್ : ರೆಬೆಲ್ ಸ್ಟಾರ್ ಅಂಬರೀಶ್ ಆಪ್ತರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ದರ್ಶನ್ ಅವರ ಜೊತೆ ಕಾರಿನಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ. ಮಲ್ಲಿಕಾರ್ಜುನ್ ಪರ ದಿವಂಗತ ಅಂಬರೀಶ್ ವಿಧಾನಸಭಾ ಚುನಾವಣೆ ವೇಳೆ ಪ್ರಚಾರ ಕೂಡ ನಡೆಸಿದ್ದರು.