ಬೆಂಗಳೂರು: ನಮ್ಮ ಬಸವಾದಿಶರಣರು 12ನೇ ಶತಮಾನದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ನೀಡುವ ಮೂಲಕ ನಮ್ಮೆಲ್ಲರಿಗೂ ಸಮಾನತೆಯ ಸಾರವನ್ನು ಹೇಳಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಬೆಂಗಳೂರಿನ ವೀರಶೈವ ಮಹಾಸಭಾದ ಕೇಂದ್ರ ಕಚೇರಿಯಲ್ಲಿ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲದ ಸಮಯದಲ್ಲಿ 12 ನೇ ಶತಮಾನದಲ್ಲಿ 30 ಕ್ಕೂ ಹೆಚ್ಚು ಶರಣೆಯರು ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಯನ್ನು ತಂದರು. ಇಷ್ಟೇ ಅಲ್ಲದೇ ಇಂದಿನ ದಿನಮಾನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ರಾಷ್ಟ್ರಪತಿ ಹಾಗೂ ಪ್ರಧಾನಿ ಮಂತ್ರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಮಹಿಳೆಯರು ವಿಧಾನಸೌಧ ಹಾಗೂ ಲೋಕಸಭೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವಂಥ ದಿನಗಳೂ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾದ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ಮಧುರ ಅಶೋಕ್, ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಉಮೇಶ್ ಹೆಚ್. ಪಾಟೀಲ್, ಸದಸ್ಯರಾದ ಭಾರತಿ ಮಗದುಮ್, ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ಅರುಣಾ ದೇವಿ, ರಾಷ್ಟ್ರೀಯ ತಂಡದ ಸದಸ್ಯೆ ಗಂಗಾಂಬಿಕೆ ಮಲ್ಲಿಕಾರ್ಜುನ್, ಬೆಂಗಳೂರು ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಬ್ರಮರಾಂಭಾ ಶಿವಶಂಕರ್ ಉಪಸ್ಥಿತರಿದ್ದರು.