ಬೆಂಗಳೂರು: ರಾಯಚೂರು, ಬೆಳಗಾವಿ, ಬಾಗಲಕೋಟೆ, ಬೀದರ್ ಜಿಲ್ಲೆಗಳಿಂದ ಬಂದಿರುವ ಮಹಿಳೆಯರು ನಗರದ ರೈಲ್ವೆ ನಿಲ್ದಾಣದಲ್ಲೇ ಕುಳಿತು ಮದ್ಯಮುಕ್ತ ಕರ್ನಾಟಕಕ್ಕಾಗಿ ಧರಣಿ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಹೋರಾಟದ ರೂವಾರಿ ಸ್ವರ್ಣಾ ಭಟ್, ಹದಿನೈದು ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ಪೊಲೀಸ್ ಇಲಾಖೆಯ ಅನುಮತಿಗೆ ಓಡಾಡಿದ್ರು ಅನುಮತಿ ಸಿಕ್ಕಿಲ್ಲ. ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದು, ಜಾಗ ಖಾಲಿ ಮಾಡುವಂತೆ ತಿಳಿಸಿದ್ದಾರೆ. ಅಲ್ಲದೆ, ಬೇರೆಲ್ಲೂ ಪ್ರತಿಭಟನೆ ನಡೆಸದಂತೆ ಹೇಳಿದ್ದಾರೆ.
ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ವರ್ಷಾಚರಣೆ ಹಿನ್ನೆಲೆ ಸಾರಾಯಿ ನಿಷೇಧ ಮಾಡಬೇಕು. ಹೆಣ್ಣುಮಕ್ಕಳು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು. ಸರ್ಕಾರ ಮಹಿಳೆಯರನ್ನು ಅವಮಾನಿಸಬಾರದು. ಮಹಿಳೆ ಮತ್ತು ಮಕ್ಕಳ ಬದುಕು ಹಸನಾಗಿಸುವ ಬೇಡಿಕೆಗೆ ಸರ್ಕಾರ ಸ್ಪಂದಿಸದೇ ಇರುವುದು ಖಂಡನಾರ್ಹ. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ತಿಳಿದಿದ್ದರೆ ಕೂಡಲೇ ನಿಯೋಗ ಭೇಟಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಪ್ರಮುಖ ಬೇಡಿಕೆಗಳು
1. ಸಂವಿಧಾನದ 73ನೇ ತಿದ್ದುಪಡಿ ಆಶಯದಂತೆ ಗ್ರಾಮಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರವನ್ನ ಗ್ರಾಮಕ್ಕೆ ನೀಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ತೀರ್ಮಾನವಾದಂತೆ ಮದ್ಯದ ಅಂಗಡಿಗಳು ಇರದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವುದು.
2. ಮದ್ಯಮುಕ್ತ ಕರ್ನಾಟಕ ನೀತಿಯ ಅನಿಷ್ಠಾನಕ್ಕೆ ಸರ್ಕಾರ ಮೂರು ತಿಂಗಳೊಳಗೆ ಸಮಿತಿ ರಚಿಸಬೇಕು.
3. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸಾಮಾಜಿಕ ನ್ಯಾಯ ಸಮಿತಿ ರಚಿಸಬೇಕು.
4. ಕುಡಿದು ಸತ್ತಿರುವ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು.