ಬೆಂಗಳೂರು: ಚುನಾವಣಾ ರಾಜಕೀಯದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಮುನ್ನೆಲೆಗೆ ಬರಲು ಬಿಎಸ್ವೈ ಪುತ್ರ ಬಿ.ವೈ ವಿಜಯೇಂದ್ರ ಸಜ್ಜಾಗಿದ್ದಾರೆ. ಸರ್ಕಾರ ಅಥವಾ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಗೆ ಪ್ರಯತ್ನ ನಡೆಸಿದ್ದು, ಇದಕ್ಕೆ ಯಡಿಯೂರಪ್ಪ ಬೆಂಬಲವಾಗಿ ನಿಂತಿದ್ದಾರೆ.
ಹೌದು, ಸಕ್ರಿಯ ರಾಜಕಾರಣದಲ್ಲಿ ಯಡಿಯೂರಪ್ಪ ಮುಂದುವರೆದರೂ ಚುನಾವಣಾ ರಾಜಕೀಯದಿಂದ ಬಹುತೇಕ ದೂರ ಉಳಿಯಲಿದ್ದಾರೆ. 75 ವರ್ಷದ ನಂತರ ಯಾವುದೇ ಅಧಿಕಾರ ಹೊಂದುವಂತಿಲ್ಲ ಎನ್ನುವ ಪಕ್ಷದ ನಿಯಮದಲ್ಲಿ ಸಡಿಲಿಕೆ ಮಾಡಿ ಈ ಬಾರಿ ಬಿಎಸ್ವೈಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಮತ್ತೆ ಅಂತಹ ಅವಕಾಶ ಇಲ್ಲ. ಹಾಗಾಗಿ, ಯಡಿಯೂರಪ್ಪ ಇದೀಗ ಪುತ್ರನನ್ನು ರಾಜಕೀಯ ಮುನ್ನೆಲೆಗೆ ತರಲು ಹೊರಟಿದ್ದಾರೆ ಎನ್ನಲಾಗುತ್ತಿದೆ.
ವಿಜಯೇಂದ್ರಗೆ ರಾಜಕೀಯ ಭವಿಷ್ಯ ರೂಪಿಸಲು ಸಿದ್ಧಗಂಗಾ ಮಠದ ಕಾರ್ಯಕ್ರಮವನ್ನೇ ಯಡಿಯೂರಪ್ಪ ಬಳಸಿಕೊಂಡಿದ್ದಾರೆ. ಈವರೆಗೂ ಮಠದ ಯಾವುದೇ ಕಾರ್ಯಕ್ರಮ ಇದ್ದರೂ ಸಚಿವ ಸೋಮಣ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮಾತ್ರ ಸೋಮಣ್ಣ ಬದಲು ವಿಜಯೇಂದ್ರ ಎಂಟ್ರಿಯಾಗಿದ್ದಾರೆ.
ಶಿವಕುಮಾರ ಸ್ವಾಮೀಜಿಗಳ 115 ನೇ ಹುಟ್ಟುಹಬ್ಬ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಅಮಿತ್ ಶಾ ಮನಗೆಲ್ಲುವಲ್ಲಿಯೂ ವಿಜಯೇಂದ್ರ ಸಫಲರಾಗಿದ್ದಾರೆ. ಇದು ವಿಜಯೇಂದ್ರ ಚುನಾವಣಾ ರಾಜಕೀಯ ಪ್ರವೇಶಕ್ಕೆ ಮಾಡಿಕೊಂಡ ಸಿದ್ಧತೆಯ ಆರಂಭಿಕ ಹೆಜ್ಜೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 'ಅಪ್ಪರ್ ಭದ್ರಾ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ'
ಸದ್ಯಕ್ಕೆ ರಾಜ್ಯ ಬಿಜೆಪಿಯಲ್ಲಿ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವ ವಿಜಯೇಂದ್ರ ಪರ ಪಕ್ಷದ ಯುವ ಕಾರ್ಯಕರ್ತರ ಪಡೆ ಹೆಚ್ಚಿನ ಒಲವು ಇರಿಸಿಕೊಂಡಿದೆ. ಹಳೆ ಮೈಸೂರು ಭಾಗದಲ್ಲಿ ವಿಜಯಂದ್ರ ಪರ ಉತ್ತಮ ಅಭಿಪ್ರಾಯವಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಬಹುಸಂಖ್ಯಾತ ಲಿಂಗಾಯತ ಸಮುದಾಯ ಬಿಎಸ್ವೈ ಪರವಿದ್ದು, ವಿಜಯೇಂದ್ರ ನಾಯಕತ್ವಕ್ಕೆ ಜೈಕಾರ ಹಾಕಲಿದೆ.
ಆದ್ರೆ, ಬೊಮ್ಮಾಯಿ ಸಂಪುಟ ಸೇರಬೇಕು ಎನ್ನುವ ಪ್ರಯತ್ನ ನಡೆಸಿರುವ ವಿಜಯೇಂದ್ರಗೆ ಹೈಕಮಾಂಡ್ ಮಣೆ ಹಾಕುವುದು ಕಷ್ಟ ಎನ್ನಲಾಗುತ್ತಿದೆ. ಯಡಿಯೂರಪ್ಪ ಒತ್ತಡಕ್ಕೆ ಮಣಿದು ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ನೀಡಿದರೆ ಅವರನ್ನು ಪರಿಷತ್ಗೆ ಆಯ್ಕೆ ಮಾಡಬೇಕಾಗಲಿದೆ.
ಸದ್ಯ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿರುವ ಸಿಎಂ ಇಬ್ರಾಹಿಂ ಪರಿಷತ್ ಸದಸ್ಯ ಸ್ಥಾನ ತೊರೆದಿರುವ ಹಿನ್ನೆಲೆಯಲ್ಲಿ ಆ ಸ್ಥಾನ ಬಿಜೆಪಿಗೆ ಅನಾಯಾಸವಾಗಿ ಲಭಿಸಲಿದೆ. ವಿಜಯಂದ್ರ ಎಂಎಲ್ಸಿ ಆಗುವುದು ಸುಲಭವೂ ಆಗಿದೆ.
ಆದರೆ, ಒಂದು ವರ್ಷದಲ್ಲೇ ಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಲಿದೆ. ಹಾಗಾಗಿ, ಈಗಿನಿಂದಲೇ ಯಾವುದಾದರೂ ಕ್ಷೇತ್ರದ ಕಡೆ ಗಮನ ಕೇಂದ್ರೀಕರಿಸಿ ವಿಧಾನಸಭೆಯಿಂದಲೇ ಅಧಿಕಾರದ ಗದ್ದುಗೆ ಏರಬೇಕು ಎನ್ನುವುದು ವಿಜಯೇಂದ್ರ ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: ಬಿಜೆಪಿ ಸಂಸ್ಥಾಪನಾ ದಿನ 2022: ಕಾರ್ಯಕರ್ತರು, ಶಾಸಕರ ಉದ್ದೇಶಿಸಿ ಪ್ರಧಾನಿ ಮೋದಿ ಮಾತು
ಇತ್ತೀಚೆಗೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿಯೂ ವಿಜಯೇಂದ್ರಗೆ ಹೆಚ್ಚಿನ ಜವಾಬ್ದಾರಿ ನೀಡುವ ಕುರಿತು ಚರ್ಚೆಯಾಗಿದೆ. ಸಂಪುಟದಲ್ಲಿ ಅವಕಾಶ ನೀಡಬೇಕೋ, ಪಕ್ಷದಲ್ಲೇ ಹೆಚ್ಚಿನ ಜವಾಬ್ದಾರಿ ನೀಡಬೇಕೋ ಎನ್ನುವ ಕುರಿತ ಪ್ರಸ್ತಾಪವಾಗಿದ್ದು, ಸಣ್ಣಮಟ್ಟಿಗಿನ ಚರ್ಚೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ವಿಜಯೇಂದ್ರಗೆ ಎರಡು ಆಯ್ಕೆಯನ್ನು ನೀಡುವ ಪ್ರಸ್ತಾಪವಿದೆ ಎನ್ನಲಾಗುತ್ತಿದೆ. ಒಂದು ಈಗಲೇ ಬೊಮ್ಮಾಯಿ ಸಂಪುಟ ಸೇರುವುದು, ಎರಡನೆಯದು ಸಂಘಟನೆ ನೇತೃತ್ವ ವಹಿಸಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹೊಸ ಸರ್ಕಾರದಲ್ಲಿ ಭಾಗಿಯಾಗುವ ಷರತ್ತು ಹಾಕಿ ಜವಾಬ್ದಾರಿ ನೀಡಲಾಗುತ್ತದೆ ಎನ್ನಲಾಗಿದೆ.
ರಾಜ್ಯ ಬಿಜೆಪಿಗೆ ಮಾಸ್ ಲೀಡರ್ ಅಗತ್ಯವಿದೆ. ಬಿಎಸ್ವೈ ಸ್ಥಾನ ತುಂಬಬಲ್ಲ ನಾಯಕ ಸದ್ಯಕ್ಕೆ ಕೇಸರಿ ಪಡೆಯಲ್ಲಿ ಕಂಡುಬಂದಿಲ್ಲ. ಲಿಂಗಾಯತ ಸಮುದಾಯದವರೇ ಆದ ಜಗದೀಶ್ ಶೆಟ್ಟರ್ ಈ ಹಿಂದೆ ಮುಖ್ಯಮಂತ್ರಿ ಆದರೂ ಮಾಸ್ ಲೀಡರ್ ಆಗಲಿಲ್ಲ, ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ವೈಯಕ್ತಿಕವಾಗಿ ಉತ್ತಮ ಹೆಸರು ಸಂಪಾದಿಸಿದರೂ ಮಾಸ್ ಇಮೇಜ್ ಪಡೆಯುವಲ್ಲಿ ಸಫಲರಾಗಿಲ್ಲ.
ಹಾಗಾಗಿ, ಸಮೂಹಿಕ ನಾಯಕತ್ವದ ಜಪ ಮಾಡಲಾಗುತ್ತಿದೆ. ಈಗ ಯಡಿಯೂರಪ್ಪ ಪುತ್ರನನ್ನು ಮುಂದಿಟ್ಟುಕೊಂಡಲ್ಲಿ ಲಿಂಗಾಯತ ಮತಗಳನ್ನು ಉಳಿಸಿಕೊಳ್ಳಬಹುದು, ಯಡಿಯೂರಪ್ಪ ವಿಶ್ವಾಸವನ್ನೂ ಗಳಿಸಿಕೊಂಡು ಚುನಾವಣೆಯನ್ನು ಎದುರಿಸಬಹುದು ಎನ್ನುವ ಲೆಕ್ಕಾಚಾರ ಪಕ್ಷದಲ್ಲಿ ನಡೆದಿದೆ.
ಅಲ್ಲದೆ, ಪಕ್ಷ ದುರ್ಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಸದೃಢಗೊಳಿಸಬಹುದಾಗಿದೆ. ಸದ್ಯಕ್ಕೆ ಪಕ್ಷಕ್ಕೆ ಹಳೆ ಮೈಸೂರು ಭಾಗ ಈ ಬಾರಿಯ ಟಾರ್ಗೆಟ್ ಆಗಿರುವ ಹಿನ್ನಲೆಯಲ್ಲಿ ವಿಜಯೇಂದ್ರಗೆ ಜವಾಬ್ದಾರಿ ನೀಡಬೇಕು ಎನ್ನುವ ಚಿಂತನೆ ಇದೆ.
ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಘಟಕದಲ್ಲಿ ಹೊಸ ಹುದ್ದೆ ಸೃಷ್ಟಿ ಚಿಂತನೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರ ಜೊತೆ ಕಾರ್ಯಾಧ್ಯಕ್ಷ ಸ್ಥಾನಗಳ ಸೃಷ್ಟಿಸಿ ಇತರ ನಾಯಕರಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಬಿಜೆಪಿಯಲ್ಲಿಯೂ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಸಿ ವಿಜಯೇಂದ್ರಗೆ ನೀಡಿದರೆ ಹೇಗೆ? ಎನ್ನುವ ಚಿಂತನೆ ನಡೆದಿದೆ. ಮತ್ತೊಂದು ಕಡೆ ಚುನಾವಣಾ ಪ್ರಚಾರ ಸಮಿತಿಯಲ್ಲಿ ಮಹತ್ವದ ಜವಾಬ್ದಾರಿ ನೀಡಿ ವಿಜಯೇಂದ್ರ ವರ್ಚಸ್ಸು ಬಳಸಿಕೊಳ್ಳಬೇಕು ಎನ್ನುವ ಚಿಂತನೆ ಮಾಡಲಾಗುತ್ತಿದೆ.
ಪಕ್ಷದ ಸಂಘಟನಾ ಜವಾಬ್ದಾರಿ ನಿರ್ವಹಿಸುತ್ತಿರುವ ವಿಜಯೇಂದ್ರ ಮುಂಬರಲಿರುವ ಚುನಾವಣೆಯಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ. ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಶಿಕಾರಿಪುರ ಕ್ಷೇತ್ರ ಅಥವಾ ಸಿದ್ದರಾಮಯ್ಯ ಪುತ್ರ ಯತೀಂದ್ರ ಶಾಸಕರಾಗಿರುವ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಬಾರಿ ಕೊನೆ ಕ್ಷಣದಲ್ಲಿ ವರುಣಾ ಕ್ಷೇತ್ರ ವಿಜಯೇಂದ್ರ ಕೈತಪ್ಪಿತ್ತು. ಈ ಬಾರಿ ಆ ಭಾಗದ ಮತದಾರರ ಸೆಳೆಯಲು ಪೂರಕವಾಗಿ ವರುಣಾದಿಂದಲೇ ಟಿಕೆಟ್ ಕೊಡುವ ಚಿಂತನೆ ಇದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ತಮ್ಮೆಲ್ಲಾ ಪ್ರಭಾವ ಬಳಸಿ ಪುತ್ರ ವಿಜಯೇಂದ್ರ ಅವರನ್ನು ರಾಜಕೀಯ ಮುನ್ನಲೆಗೆ ತರಲು ಪ್ರಯತ್ನ ನಡೆಸಿದ್ದಾರೆ. ಸಚಿವ ಸ್ಥಾನ ಅಥವಾ ಪಕ್ಷದ ಆಯಕಟ್ಟಿನ ಜಾಗದಲ್ಲಿ ಅವಕಾಶ ಕಲ್ಪಿಸಲು ತಂತ್ರ ರೂಪಿಸಿದ್ದು, ಇದಕ್ಕೆ ಹೈಕಮಾಂಡ್ ಯಾವ ರೀತಿ ಸ್ಪಂದಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಿಎಂ ದೆಹಲಿ ಯಾತ್ರೆ; ಇಂದು ನಡ್ಡಾ, ಅಮಿತಾ ಶಾ ಭೇಟಿ, ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಸಾಧ್ಯತೆ!