ಬೆಂಗಳೂರು: ಆನೆ ಹಾವಳಿ ನಿಯಂತ್ರಣಕ್ಕಾಗಿ ಕಾರಿಡಾರ್ ನಿರ್ಮಿಸಲು ಬೇಕಾಗುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೂಡಿ ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವರಲ್ಲಿ ಮನವಿ ಮಾಡಲಿದ್ದೇನೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾಗಿರುವ ಸಮಸ್ಯೆ, ಪರಿಹಾರೋಪಾಯ ಬಗ್ಗೆ ಚರ್ಚೆಗೆ ಅವರು ಉತ್ತರ ನೀಡಿದರು.
ಈಗಾಗಲೇ ಕಾರಿಡಾರ್ ಕಟ್ಟುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 617 ಕಿ.ಮೀ. ಕಿ.ಮೀ.ಕಾರಿಡಾರ್ ಕಟ್ಟಬೇಕು. ಈವರೆಗೆ 181 ಕಿ.ಮೀ. ಕಾರಿಡಾರ್ ಕಟ್ಟಲಾಗಿದೆ. ಇನ್ನೂ ಸುಮಾರು 390 ಕಿ.ಮೀ. ಕಾರಿಡಾರ್ ಕಟ್ಟಬೇಕಿದೆ ಎಂದರು.
ರೈಲ್ವೇ ಹಳಿ ಹಾಕಿ ಕಾರಿಡಾರ್ ಹಾಕಿದರೆ ಶಾಶ್ವತ ಪರಿಹಾರ ಸಿಗುತ್ತದೆ. ಇದಕ್ಕಾಗಿ ಸುಮಾರು 595 ಕೋಟಿ ರೂ. ಬೇಕಾಗುತ್ತದೆ. ಸದನ ಮುಗಿದ ತಕ್ಷಣ ದೆಹಲಿಗೆ ಹೋಗಿ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ, ಅವರ ಜೊತೆಗೂಡಿ ಕೇಂದ್ರ ಪರಿಸರ ಸಚಿವರನ್ನು ಭೇಟಿಯಾಗಿ ಅನುದಾನ ನೀಡುವಂತೆ ಮನವಿ ಮಾಡುತ್ತೇವೆ. ಎರಡು ವರ್ಷದಲ್ಲಿ ಬ್ಯಾರಿಕೇಡ್ ಕಟ್ಟುವ ಕೆಲಸ ಮಾಡುತ್ತೇವೆ. ಜೊತೆಗೆ ಪರಿಹಾರ ಸಂಬಂಧ ಸಮಿತಿ ಇದೆ. ಪರಿಹಾರ ಹಣ ಪರಿಷ್ಕರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಮಾತನಾಡುತ್ತಾ, ಏಳು ವರ್ಷದ ಹಿಂದೆ ಕಾಡು ಪ್ರಾಣಿಗಳಿಂದ ಆಗಿರುವ ಬೆಳೆ ಹಾನಿಗೆ ಕೊಟ್ಟಿರುವ ಪರಿಹಾರವನ್ನೇ ಈಗಲೂ ಕೊಡುತ್ತಿದ್ದಾರೆ. ಬೆಳೆ ಪರಿಹಾರವನ್ನು ಕೂಡಲೇ ಪರಿಷ್ಕರಿಸಬೇಕು. ಜೊತೆಗೆ ಪರಿಹಾರ ಬಾಕಿ ಉಳಿದುಕೊಂಡಿದ್ದು, ಅದನ್ನೂ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನಲ್ಲಿ ಮೇಲ್ಜಾತಿಯವರು ಎಸ್ಸಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ: ಪಿ.ರಾಜೀವ್