ಬೆಂಗಳೂರು: ವೈನ್, ವಿಸ್ಕಿ ಸೇರಿದಂತೆ ದುಬಾರಿ ಮೌಲ್ಯದ ಮದ್ಯದ ಬೆಲೆ ಕಡಿಮೆ ಮಾಡಿ ಸುಮಾರು ಐದು ಕೋಟಿ ರೂ. ಗಳಷ್ಟು ಹೆಚ್ಚುವರಿ ಆದಾಯ ಗಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ದುಬಾರಿ ಬೆಲೆಯ ಮದ್ಯದ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸಿದರೆ ಹೆಚ್ಚು ಮದ್ಯ ಮಾರಾಟವಾಗಲಿದೆ ಎಂಬ ಲೆಕ್ಕಾಚಾರ ಹಾಕಿರುವ ಸರ್ಕಾರ, ಈ ಚಿಂತನೆ ನಡೆಸಿದೆ.
ಈ ಸಂಬಂಧ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದು, ಇದರ ಬೆನ್ನಲ್ಲೇ ಇದಕ್ಕೆ ಪ್ರೇರಣೆ ನೀಡಿದ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಆದರೆ ಹಿಂದಿನಂತೆ ಅಬಕಾರಿ ಇಲಾಖೆಯ ಡಿಸಿ ಹಂತದ ಅಧಿಕಾರಿಗಳ ಬದಲು ಖುದ್ದಾಗಿ ತಾವೂ ಒಂದು ರಾಜ್ಯಕ್ಕೆ ತಂಡದೊಂದಿಗೆ ಭೇಟಿ ನೀಡಲಿದ್ದಾರೆ.
ಉಳಿದಂತೆ ಅಬಕಾರಿ ಇಲಾಖೆಯ ಆಯುಕ್ತರು, ಜಂಟಿ ಆಯುಕ್ತರು, ಸಹಾಯಕ ಆಯುಕ್ತರ ನೇತೃತ್ವದ ತಂಡಗಳು ಈ ಯೋಜನೆಯ ಸಾಧಕ - ಬಾಧಕಗಳನ್ನು ಅಧ್ಯಯನ ಮಾಡಲು ಬೇರೆ ಬೇರೆ ರಾಜ್ಯಗಳಿಗೆ ತೆರಳಲಿವೆ ಎಂದು ಉನ್ನತ ಮೂಲಗಳು ಈಟಿವಿ ಭಾರತ್ಗೆ ತಿಳಿಸಿವೆ. ದುಬಾರಿ ಬೆಲೆಯ ವಿಸ್ಕಿ, ವೈನ್ ಸೇರಿದಂತೆ ವಿವಿಧ ಮದ್ಯದ ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತ ಮಾಡುವ ಮೂಲಕ ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳು ಅಬಕಾರಿ ಆದಾಯದಲ್ಲಿ ಗಣನೀಯ ಏರಿಕೆ ಕಂಡಿವೆ.
ದುಬಾರಿ ಬೆಲೆಯ ಮದ್ಯಕ್ಕಷ್ಟೇ ತೆರಿಗೆ ಕಡಿತ: ಅದೇ ರೀತಿ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯದ ಪ್ರಸ್ತುತ ಮಾರುಕಟ್ಟೆ ಬೆಲೆ ಒಂದು ಸಾವಿರ, ಎರಡು ಸಾವಿರ ರೂ.ಗಳಷ್ಟು ಕಡಿಮೆ ಆದರೆ ಮದ್ಯದ ಮಾರಾಟ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಆ ಮೂಲಕ ತೆರಿಗೆ ಕಡಿತ ಮಾಡಿದರೂ ಆದಾಯದಲ್ಲಿ ದೊಡ್ಡ ಏರಿಕೆ ಆಗಲಿದೆ ಎಂಬುದು ಸಚಿವರ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.
ಆದರೆ, ಈ ತೆರಿಗೆ ಕಡಿಮೆ ಮುಖಬೆಲೆಯ ಮದ್ಯಕ್ಕೆ ಅನ್ವಯಿಸದಿರಲು ತೀರ್ಮಾನಿಸಲಾಗಿದ್ದು, ದುಬಾರಿ ಬೆಲೆಯ ಮದ್ಯವನ್ನೇ ಕೇಂದ್ರ ಬಿಂದುವನ್ನಾಗಿಟ್ಟುಕೊಳ್ಳಲಾಗಿದೆ. ಈ ಮಧ್ಯೆ ಕರ್ನಾಟಕವನ್ನು ಮಾದರಿಯಾಗಿಟ್ಟುಕೊಂಡ ಪಶ್ಚಿಮ ಬಂಗಾಳ ಸರ್ಕಾರ ಮದ್ಯದ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡಿದ ಪರಿಣಾಮವಾಗಿ ಅದರ ಅಬಕಾರಿ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸರ್ಕಾರ ಜೊತೆ ಮದ್ಯಪ್ರಿಯನಿಗೂ ಪ್ರಿಯವಾಗುವಂತೆ ತೆರಿಗೆ ಕಡಿತ: ಕಳೆದ ಸಾಲಿನಲ್ಲಿ ರಾಜ್ಯದ ಅಬಕಾರಿ ಆದಾಯ ಅಂದಾಜು 25 ಸಾವಿರ ಕೋಟಿ ರೂ. ಗಳಷ್ಟಾಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಆದಾಯದ ಪ್ರಮಾಣ 26 ಸಾವಿರ ಕೋಟಿ ರೂ. ಗಳಷ್ಟು ದಾಟಿತ್ತು. ಇದೇ ಕಾರಣಕ್ಕಾಗಿ ಈ ಸಾಲಿನ ಬಜೆಟ್ನಲ್ಲಿ ಅಬಕಾರಿ ಬಾಬ್ತಿನಿಂದ 29 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಲಾಗಿದೆಯಾದರೂ ಈ ಪ್ರಮಾಣ 30 ಸಾವಿರ ಕೋಟಿ ರೂ.ಗಳಷ್ಟಾಗಬಹುದು ಎಂಬ ಅಂದಾಜಿದೆ.
ಇಂತಹ ಸಂದರ್ಭದಲ್ಲಿ ದುಬಾರಿ ಬೆಲೆಯ ಮದ್ಯದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದರೆ ಇನ್ನೂ ಹೆಚ್ಚುವರಿಯಾಗಿ 5000 ಕೋಟಿ ರೂ. ಗಳಷ್ಟು ಆದಾಯ ಬೊಕ್ಕಸಕ್ಕೆ ಹರಿದು ಬರಲಿದೆ ಎಂದು ಅಂದಾಜಿಸಲಾಗಿದೆ. ದುಬಾರಿ ಬೆಲೆಯ ಮದ್ಯ ಖರೀದಿಸುವವರಿಗೂ ಅನುಕೂಲವಾಗಬೇಕು. ಅದೇ ರೀತಿ ಸರ್ಕಾರದ ಆದಾಯದ ಪ್ರಮಾಣವೂ ಹೆಚ್ಚಬೇಕು ಎಂಬುದು ಸರ್ಕಾರದ ನಿಲುವು.
ಸರ್ಕಾರಕ್ಕೆ ಈಗಿರುವ ಮಾಹಿತಿಯ ಪ್ರಕಾರ, ದೆಹಲಿ, ಮಹಾರಾಷ್ಟ್ರ, ತೆಲಂಗಾಣದಂತಹ ರಾಜ್ಯಗಳಲ್ಲಿ ಮದ್ಯದ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಇರುವುದರಿಂದ ಆ ರಾಜ್ಯಗಳಿಗೆ ಭೇಟಿ ನೀಡುತ್ತಿರುವ ಮದ್ಯಪ್ರಿಯರು ಐದು, ಆರು ಬಾಟಲಿಗಳನ್ನು ಖರೀದಿಸಿ ತರುತ್ತಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಂದ ಈ ರೀತಿ ರಾಜ್ಯಕ್ಕೆ ಹರಿದು ಬರುತ್ತಿರುವ ಮದ್ಯದ ಪ್ರಮಾಣ ಸಾವಿರಾರು ಕೋಟಿ ರೂಪಾಯಿಗಳಷ್ಟಿದೆ ಎಂಬ ವರದಿಯೂ ರಾಜ್ಯ ಸರ್ಕಾರದ ನಿದ್ದೆಗೆಡಿಸಿತ್ತು.
ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಇಂತಹ ಮದ್ಯ ಬರುವುದಾದರೆ ಆ ಮದ್ಯ ಅಲ್ಲಿನ ಬೆಲೆಗೇ ಇಲ್ಲಿ ಸಿಗುವಂತಾದರೆ ಬೊಕ್ಕಸಕ್ಕೂ ಲಾಭ ಎಂಬುದು ಸರ್ಕಾರದ ಯೋಚನೆಯಾಗಿದೆ. ಆದರೆ ತೆರಿಗೆ ಕಡಿತ ಕೇವಲ ದುಬಾರಿ ಬೆಲೆಯ ಮದ್ಯಕ್ಕೆ ಮಾತ್ರ ಅನ್ವಯಿಸಲಿದ್ದು,ಕಡಿಮೆ ಮೌಲ್ಯದ ಮದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: 2021-22ರ ನಿಗದಿತ ಗುರಿ ದಾಟಿ ಭರ್ಜರಿ ರಾಜಸ್ವ ಸಂಗ್ರಹ ಮಾಡಿದ ಅಬಕಾರಿ ಇಲಾಖೆ