ಬೆಂಗಳೂರು: ಸಾವಿರಾರು ಜನರ ಪ್ರಾಣಹಾನಿಗೆ ಕಾರಣವಾಗಿರುವ ಕೊರೊನಾ ವೈರಸ್ ಕುರಿತಂತೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಬರುವ ಎಲ್ಲಾ ಕೈದಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ. ಅದೃಷ್ಟವಶಾತ್ ಇದುವರೆಗೂ ಯಾವ ಕೈದಿಗಳಿಗೂ ಪಾಸಿಟಿವ್ ಕಂಡು ಬಂದಿಲ್ಲ.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪ್ರವೇಶಿಸುವ ಕೈದಿಗಳನ್ನು ಮೊದಲು ಪ್ರತ್ಯೇಕವಾಗಿ ಜೈಲು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರೀಕ್ಷೆ ಬಳಿಕ ಕೆಲ ದಿನಗಳಲ್ಲಿ ಕೊರೊನಾ ಗುಣಲಕ್ಷಣಗಳು ಕಂಡುಬಂದರೆ ಅಂತಹವರನ್ನು ಎಲ್ಲಾ ಕೈದಿಗಳೊಂದಿಗೆ ಇರಲು ಅವಕಾಶ ಕೊಡದೆ ಪ್ರತ್ಯೇಕ ವಾರ್ಡ್ ಗಳಲ್ಲಿ ಇರಿಸಲಾಗುತ್ತಿದೆ. ಜೈಲು ಸಿಬ್ಬಂದಿ ಕೂಡ ಹೊಸದಾಗಿ ಬಂದಿರುವ ಕೈದಿಗಳೊಂದಿಗೆ ಸಾಮಾಜಿಕ ಅಂತರ ಕಾಪಾಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಜೈಲು ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಬಂಧಿಖಾನೆ ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಪರಾಧವೆಸಗಿ ಜೈಲು ಸೇರುವವರ ಸಂಖ್ಯೆ ಕಡಿಮೆಯಾದರೂ ಆತಂಕ ಮಾತ್ರ ದೂರವಾಗಿಲ್ಲ. ಜೈಲಿಗೆ ಬರುವ ಆರೋಪಿಗಳಿಗೆ ಏನಾದರೂ ಸೋಂಕು ತಗುಲಿದ್ದರೆ, ಕಾರಾಗೃಹ ಸಿಬ್ಬಂದಿ ಹಾಗೂ ಇತರೆ ಆರೋಪಿಗಳಿಗೂ ವೇಗವಾಗಿ ಹರಡುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿರುವ ಎಲ್ಲಾ ಕೈದಿಗಳಿಗೆ ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಎಂಟು ಕೇಂದ್ರ ಕಾರಾಗೃಹಗಳಾದ ಬೆಂಗಳೂರು, ಬಳ್ಳಾರಿ, ಬೆಳಗಾವಿ, ಮೈಸೂರು, ಶಿವಮೊಗ್ಗ, ಬಿಜಾಪುರ, ಧಾರವಾಡ ಹಾಗೂ ಕಲಬುರಗಿ ಹೀಗೆ ಜಿಲ್ಲಾ ಮಟ್ಟದಲ್ಲಿ 21, ತಾಲೂಕು ಮಟ್ಟದಲ್ಲಿ 28 ಸೇರಿದಂತೆ ಒಟ್ಟು 58 ಕಾರಾಗೃಹಗಳ ಪೈಕಿ 15 ಸಾವಿರ ಕೈದಿಗಳಿದ್ದಾರೆ.
ಈ ಪೈಕಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ 4,529 ಕೈದಿಗಳಿದ್ದಾರೆ. ಇದರ ಜೊತೆಗೆ ಕೈದಿಗಳ ಭದ್ರತೆಗೆ ನಿಯೋಜನೆಗೊಂಡಿರುವ ಜೈಲು ಸಿಬ್ಬಂದಿ ಕೂಡ ತಪಾಸಣೆಗೆ ಒಳಪಡಿಸುವಂತೆ ಅರೋಗ್ಯ ಇಲಾಖೆಯಿಂದ ಡಿಹೆಚ್ಒ ಗೆ ಪತ್ರ ಬರೆದಿತ್ತು. ಪ್ರತಿಯೊಬ್ಬ ಕೈದಿಯ ಹೆಸರು, ವಿಳಾಸ, ಕ್ರೈಂ ಕೇಸ್ ಡಿಟೇಲ್ಸ್ ಪಡೆದು ತಪಾಸಣೆ ನಡೆಸಲು ಸೂಚನೆ ನೀಡಲಾಗಿತ್ತು. ಇದರಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದಾಗಿ ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಬಂಧಿಖಾನೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು:
1) ವಿಸಿಟರ್ ಗಳಿಗಿಲ್ಲ ಪ್ರವೇಶ
2) ಸೆರೆಮನೆಯಲ್ಲಿರುವ ಕೈದಿಗಳನ್ನು ನೋಡಲು ಕುಟುಂಬಸ್ಥರು, ಸಂಬಂಧಿಕರು ಭೇಟಿ ನೀಡುವುದಕ್ಕೆ ನಿಷೇಧ
3) ಆರೋಪಿಯ ವಿಚಾರಣೆಯಿದ್ದರೆ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು
4) ಜೈಲು ಸಿಬ್ಬಂದಿ ಸೇರಿದಂತೆ ಎಲ್ಲಾ ಕೈದಿಗಳಿಗೂ ಮಾಸ್ಕ್ ಧರಿಸುವುದು ಕಡ್ಡಾಯ
5) ಹೊಸದಾಗಿ ಬರುವ ಆರೋಪಿಗಳ ಬಗ್ಗೆ ಸೂಕ್ತ ನಿಗಾ ವಹಿಸಲಾಗುತ್ತಿದೆ.