ಬೆಂಗಳೂರು: ನಗರ ಹಾಗೂ ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವೆಡೆಯಿಂದ ಸಾವಿರಾರು ರೋಗಿಗಳು ಚಿಕಿತ್ಸೆಗೆಂದು ವೈದೇಹಿ ಆಸ್ಪತ್ರೆಗೆ ಆಗಮಿಸುತ್ತಿದ್ದು, ಚಿಕಿತ್ಸೆಯಲ್ಲಿ ಯಾವುದೇ ಕೊರತೆ ಇಲ್ಲದಿದ್ದರೂ ಸಹ ಕುಡಿಯಲು ಹಾಗೂ ಇತರೆ ಕಾರ್ಯಗಳಿಗೆ ನೀರಿಲ್ಲದೆ ವೈದ್ಯರು ಹಾಗೂ ರೋಗಿಗಳು ಪರದಾಡುವಂತಾಗಿದೆ.
1,200 ಬೆಡ್ ಒಳಗೊಂಡಿರುವ ವೈದೇಹಿ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು, ಪ್ರತಿನಿತ್ಯ 10 ಲಕ್ಷ ಲೀಟರ್ ನೀರು ಬಳಕೆಯಾಗುತ್ತಿತ್ತು. ವೈಟ್ ಫೀಲ್ಡ್ ಭಾಗಕ್ಕೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಿಂದ ಟ್ಯಾಂಕರ್ ವಾಹನಗಳ ಮೂಲಕ ನೀರು ಪೂರೈಸುತ್ತಿದ್ದು, ಟ್ಯಾಂಕರ್ನವರಿಗೆ ಹೊಸಕೋಟೆ ತಾಲೂಕಿನಲ್ಲಿ ನೀರು ಕೊಡದ ಹಿನ್ನೆಲೆ ಕಳೆದ ಎರಡು ದಿನಗಳಿಂದ ವಾಟರ್ ಟ್ಯಾಂಕರ್ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ವೈದೇಹಿ ಆಸ್ಪತ್ರೆಯ ವೈದ್ಯರಾದ ಡಾ.ರವಿಬಾಬು ತಿಳಿಸಿದ್ದಾರೆ.
ಇನ್ನು ನನ್ನ ಮಗನಿಗೆ ವಾಂತಿ, ಭೇದಿ ಅಗುತ್ತಿದೆ. ಆದ್ದರಿಂದ ವೈದೇಹಿ ಆಸ್ಪತ್ರೆಗೆ ಬಂದಿದ್ದೇನೆ, ಇಲ್ಲಿ ಕಳೆದ ಎರಡು ದಿನಗಳಿಂದ ನೀರು ಇಲ್ಲ, ಶೌಚಾಲಯಕ್ಕೆ ಹೋದರೂ ನೀರಿಲ್ಲದೆ ಪರದಾಡುವಂತಾಗಿದೆ ಎಂದು ರೋಗಿಯ ಸಂಬಂಧಿಯೊಬ್ಬರು ಅಳಲು ತೋಡಿಕೊಂಡರು.
ಒಟ್ಟಿನಲ್ಲಿ ಕೊರೊನಾ, ಕಾಲರಾದಂತಹ ಮಾರಕ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಪರ್ಯಾಯ ಮಾರ್ಗ ಒದಗಿಸಬೇಕಿದೆ.