ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಸರ್ಕಾರ ಖಾಸಗಿ ಆಸ್ಪತ್ರೆಗಳ ಸಹಕಾರಕ್ಕೆ ಮೊರೆ ಹೋಯಿತು. ಮೊದಮೊದಲು ಅಸಹಾಕಾರ ತೋರಿದ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆ ಕೊಡಲಿಲ್ಲ. ಹೀಗಾಗಿ, ರೋಗಿಗಳು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಪರದಾಡುವಂತಾಯಿತು. ಬಳಿಕ ಸರ್ಕಾರದ ಎಚ್ಚರಿಕೆಗೆ ಬಗ್ಗದ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಕಾರಣ ಕೇಳಿತು. ಇದಕ್ಕೂ ಜಗ್ಗದ ಆಸ್ಪತ್ರೆಗಳ ವಿರುದ್ದ ಒಪಿಡಿ ಬಂದ್ ಮಾಡಿಸಿದ ಘಟನೆಗಳು ನಡೆದವು.
ಕೆಲ ಖಾಸಗಿ ಆಸ್ಪತ್ರೆಗಳು ಲ್ಯಾಬ್ ಟೆಸ್ಟ್ನಲ್ಲಿ ನಿಗದಿಗಿಂತ ಹೆಚ್ಚಿನ ಹಣ ಪಡೆಯುವುದು, ಕೊರೊನಾ ಚಿಕಿತ್ಸೆ ನೆಪದಲ್ಲಿ ಲಕ್ಷ ಲಕ್ಷ ಬಿಲ್ ಹಾಕಿದ್ದೂ ಇದೆ. ಆದರೆ, ಹಾಸಿಗೆ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಬೆನ್ನು ತೋರಿಸಿದ ಆಸ್ಪತ್ರೆಗಳು ನಂತರ ದಾಖಲಾತಿಗೆ ನಿರಾಕರಿಸಿದವು. ಅದಕ್ಕೆ ಕಡಿವಾಣ ಹಾಕಲು ಕೆಪಿಎಂಇ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮಕ್ಕೆ ಮುಂದಾಯಿತು.
4 ಆಸ್ಪತ್ರೆಗಳ ಲೈಸೆನ್ಸ್ ರದ್ದು: ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದ ಹಿನ್ನೆಲೆ ದೈನಂದಿನ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಸೂಚಿಸಿತ್ತು. ಆದರೆ, ಐಎಲ್ಐ,ಎಸ್ಎಆರ್ಐ (SARI) ಸೋಂಕಿತರ ಮಾಹಿತಿ ನೀಡದ 4 ಆಸ್ಪತ್ರೆಗಳ ಪರವಾನಗಿ ರದ್ದು ಮಾಡಿತ್ತು. ಒಟ್ಟು 17 ಖಾಸಗಿ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಇದರಲ್ಲಿ 13 ಆಸ್ಪತ್ರೆಗಳು ತಪ್ಪೊಪ್ಪಿಗೆ ಸಲ್ಲಿಸಿದವು. ಆದರೆ, ನಾಲ್ಕು ಆಸ್ಪತ್ರೆಗಳು ಉತ್ತರ ನೀಡದ ಕಾರಣ ಪರವಾನಗಿ ರದ್ದು ಮಾಡಿತ್ತು.
ಯಾವ್ಯಾವ ಆಸ್ಪತ್ರೆಗಳು?: ಸಹಕಾರನಗರದ ನಮ್ಮ ಕ್ಲಿನಿಕ್, ಪೀಣ್ಯ ಎರಡನೇ ಹಂತದ ಪಂಚಮುಖಿ ಸ್ಪೆಷಲ್, ಸುಧಾಮ ನಗರದ ಮಾತೃ ಛಾಯಾ ಕ್ಲಿನಿಕ್, ಗಾಯತ್ರಿ ನಗರದ ನಾಯಕ್ ಆಸ್ಪತ್ರೆಯ ಪರವಾನಗಿ ರದ್ದಾಗಿದೆ. ಇಷ್ಟಲ್ಲದೆ ಸರ್ಕಾರ ರೆಫರ್ ಮಾಡಿದ ಸೋಂಕಿತರಿಗೆ ಪ್ರವೇಶ ನಿರಾಕರಿಸಿದ ಹಲವು ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿತ್ತು. ಸರ್ಕಾರ ನಿಗದಿಪಡಿಸಿದ ಹಾಸಿಗೆ ನೀಡುವಲ್ಲಿ ವಿಕ್ರಮ್ ಆಸ್ಪತ್ರೆ ವಿಫಲವಾಗಿತ್ತು. ಜೊತೆಗೆ ನೋಟಿಸ್ಗೆ ಉತ್ತರ ನೀಡದ ಕಾರಣ ವಿಕ್ರಮ್ ಆಸ್ಪತ್ರೆ ಹಾಗೂ ಸಾಗರ್ ಅಪೋಲೊ ಆಸ್ಪತ್ರೆ ಒಪಿಡಿಯನ್ನು 48 ಗಂಟೆಗಳ ಕಾಲ ಆರೋಗ್ಯಾಧಿಕಾರಿಗಳು ಬಂದ್ ಮಾಡಿದ್ದರು.
ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನಕಾರ : ಸೋಂಕಿತರಿಗಷ್ಟೇ ಸಮಸ್ಯೆ ಆಗಲಿಲ್ಲ. ಬದಲಿಗೆ ಕೋವಿಡೇತರ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸಿದರು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬೆಂಗಳೂರಿನ ಶೇಷಾದ್ರಿಪುರಂನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಸಿಬ್ಬಂದಿ ಕೋವಿಡೇತರ ಚಿಕಿತ್ಸೆ ನೀಡದಿರುವ ಕುರಿತು ಸುದ್ದಿಯಾಗಿತ್ತು.
ಖಾಸಗಿ ಆಸ್ಪತ್ರೆ ಬೇಜವಾಬ್ದಾರಿತನಕ್ಕೆ ನಟಿ ಸುಧಾರಾಣಿ ಬೇಸರ ವ್ಯಕ್ತಪಡಿಸಿದ್ದರು. ನಟಿಯ ಅಣ್ಣನ ಪುತ್ರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆತಂದಾಗ ಒಂದು ಗಂಟೆಗಳ ಕಾಲ ಗೇಟ್ನಿಂದ ಹೊರಗೆ ನಿಲ್ಲಿಸಿದ್ದರು. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದರು. ಅದಕ್ಕೆ ಕೆಂಡಾಮಂಡಲರಾದ ನಟಿ, ಅಂದಿನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಗೆ ವಿಷಯ ಮುಟ್ಟಿಸಿದ್ದರು. ನಂತರ ಚಿಕಿತ್ಸೆ ನೀಡಲಾಯಿತು.
ಈ ರೀತಿಯ ಅದೆಷ್ಟೋ ಘಟನೆಗಳು ಕೊರೊನಾ ಸಂದರ್ಭದಲ್ಲಿ ನಡೆದಿವೆ. ಆದರೆ, ಇದ್ಯಾವುದು ಲಿಖಿತ ದೂರಿನವರೆಗೆ ಹೋಗದೇ ಮಾತುಕತೆಯಲ್ಲೇ ಸಂಧಾನವಾಗಿರುವುದು ಗಮನಿಸಬಹುದು. ಇನ್ನು, ಈ ಹಿಂದಿನ ಪರಿಸ್ಥಿತಿ ಇಲ್ಲದೇ ಇರುವುದರಿಂದ ಕೊಂಚ ಸಮಸ್ಯೆಗಳು ಕಡಿಮೆಯಾದಂತಿವೆ.