ಬೆಂಗಳೂರು: ಕೆ. ಜಿ. ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್ನಲ್ಲಿ ಪತ್ತೆಯಾಗಿರುವುದು ಫೇಕ್ ವೋಟರ್ ಕಾರ್ಡ್ ಅಲ್ಲ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಭಾತ್ ಕಾಂಪ್ಲೆಕ್ಸ್ನಲ್ಲಿ ಕೆಲ ಪ್ರಿಂಟರ್ಸ್, 10 ಸಿಪಿಯು, 8 ಕೀಬೋರ್ಡ್, 1 ಎಚ್ಪಿ ಸ್ಕ್ಯಾನರ್, 3 ಲ್ಯಾಪ್ ಟಾಪ್, 270 ಹ್ಯಾಂಡ್ ಪ್ರಿಂಟರ್, 45 ಖಾಲಿ ಪೌಚ್, 400 ಚಾರ್ಜರ್ಸ್, 50 ಬ್ಯಾಟರೀಸ್, 450 ಪೇಪರ್ ರೋಲ್ಸ್ ವಶಕ್ಕೆ ಪಡೆಯಲಾಗಿದೆ. ವೋಟರ್ ಲಿಸ್ಟ್ಗಳನ್ನು ಅವರು ಡಿಜಿಟೈಸ್ ಮಾಡುತ್ತಿದ್ದರು. ವೋಟರ್ ಸ್ಲಿಪ್ ದಾಖಲೆಗಳಲ್ಲಿ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷದ ಹೆಸರು ಹಾಕಿದ್ದ ಹಿನ್ನೆಲೆ 127 ಎ ಕಾಯ್ದೆಯಡಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕೆ. ಜಿ. ರಸ್ತೆಯ ಪ್ರಭಾಸ್ ಕಾಂಪ್ಲೆಕ್ಸ್ನಲ್ಲಿ ವೋಟರ್ ಐಡಿ ಕಾರ್ಡ್ ಪತ್ತೆ ಪ್ರಕರಣ ಸಂಬಂಧ ಫ್ಲೈಯಿಂಗ್ ಸ್ಕ್ವಾಡ್ ತನಿಖೆ ನಡೆಸಿದ್ದು, ಈ ವೇಳೆ ಇಬ್ರಾಹಿಂ ಎಂಬಾತನನ್ನು ವಿಚಾರಣೆ ಮಾಡಲಾಗಿದೆ. ಆ ವೇಳೆ ಇಬ್ರಾಹಿಂ ತಾನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಕೆಲಸ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಡೋರ್ ಟು ಡೋರ್ ಭೇಟಿ ನೀಡಿ ಸಮೀಕ್ಷೆ ನಡೆಸಿ, ವಲಸೆ ಹಾಗೂ ಸ್ಥಳಾಂತರಗೊಂಡ ಮತದಾರರ ಅಧ್ಯಯನ ವರದಿಯನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದ್ದಾನೆ.
ಕಾಂಗ್ರೆಸ್ ಕಚೇರಿಯ ಪರಿಚಿತ ಸಿಬ್ಬಂದಿಯಿಂದ ಭಾವಚಿತ್ರ ಇರುವ ಮತದಾರರ ಪಟ್ಟಿಯ ಪ್ರತಿಯನ್ನು ಸಂಗ್ರಹಿಸಿದ್ದು, ಅದರ ನೆರವಿನಿಂದ ಎಕ್ಸೆಲ್ ಫಾರ್ಮೇಟ್ನಲ್ಲಿ ವಲಸೆ ಹೋದ ಮತದಾರರ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಇಬ್ರಾಹಿಂ ತಿಳಿಸಿದ್ದಾನೆ. ಈ ಮೂಲಕ ವಲಸೆ ಮತದಾರರನ್ನು ಗುರುತಿಸಿ, ಮತದಾನ ಮಾಡಲು ಪ್ರೇರೇಪಿಸುವುದು ಇದರ ಹಿಂದಿನ ಉದ್ದೇಶ. ಈ ಕೆಲಸಕ್ಕೆ ಕೈ ಅಭ್ಯರ್ಥಿ ರಿಜ್ವಾನ್ ಅಹಮ್ಮದ್ ಹಣ ಪಾವತಿ ಮಾಡಿದ್ದಾರೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ನಾಲ್ಕು ಕ್ಷೇತ್ರಗಳು ಸೂಕ್ಷ್ಮ ಪ್ರದೇಶ:
ಹಣದ ಹೊಳೆ ಹರಿಯುವ ವಿಚಾರದಲ್ಲಿ ನಾಲ್ಕು ಕ್ಷೇತ್ರಗಳನ್ನು ಚುನಾವಣಾ ಆಯೋಗ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ತುಮಕೂರು, ಮಂಡ್ಯ, ಹಾಸನ ಹಾಗೂ ಬೆಂ. ಗ್ರಾಮಾಂತರ ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರಗಳಾಗಿ ಗುರುತಿಸಿದೆ. ಈ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದ್ದು, ಇದರ ಆಧಾರದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಸೂಕ್ಷ್ಮ ಪ್ರದೇಶವೆಂದು ಚುನಾವಣಾ ಆಯೋಗ ಗುರುತಿಸಿದೆ.
78.84 ಕೋಟಿ ರೂ. ಹಣ, ಮದ್ಯ ವಶ:
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆ ಈತನಕ 78.84 ಕೋಟಿ ರೂ. ಮೌಲ್ಯದ ಹಣ, ಮದ್ಯ ಹಾಗೂ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸ್ಟಾಟಿಕ್ ಸರ್ವೈವಲೆನ್ಸ್ ಸ್ಕ್ವಾಡ್ ತಂಡ 16.65 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ. ಅಬಕಾರಿ ಇಲಾಖೆಯು 36.22 ಕೋಟಿ ರೂ. ಮೌಲ್ಯದ 9,12,832 ಲೀ ಮದ್ಯ, 4.48 ಲಕ್ಷ ರೂ. ಮೌಲ್ಯದ 14.977 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಂಡಿದೆ. ಆದಾಯ ತೆರಿಗೆ ಇಲಾಖೆಯು 15.60 ಕೋಟಿ ರೂ. ನಗದು ಹಾಗೂ 6.51 ಮೌಲ್ಯದ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದೆ.