ಬೆಂಗಳೂರು: ಈಗಾಗಲೇ ಕೊರೊನಾರ್ಭಟ ಹೆಚ್ಚಾಗಿದೆ. ಇದರ ಜೊತೆಗೆ ಈ ಸಲ ಭಾರೀ ಮಳೆ ಸುರಿಯುತ್ತಿರುವ ಕಾರಣ ಸದ್ದಿಲ್ಲದೇ ಸಾಂಕ್ರಾಮಿಕ ರೋಗಗಳು ಕಾಡಲು ಶುರು ಮಾಡುತ್ತಿವೆ. ಈ ಸಮಯದಲ್ಲೇ ಕೊರೊನಾ ಸೋಂಕು ಹೆಚ್ಚು ಹರಡುತ್ತಿದ್ದು, ಇದೀಗ ಸಾಮಾನ್ಯ ಶೀತ, ಜ್ವರ, ಕೆಮ್ಮು ಬಂದರೂ ಜನರು ಅಯ್ಯೋ ಕೊರೊನಾನಾ ಎಂದು ಭಯಪಡುವಂತಾಗಿದೆ.
ಸಾಮಾನ್ಯವಾಗಿ ವಾತಾವರಣ ಬದಲಾದಂತೆ ಕೆಲವರಲ್ಲಿ ನೆಗಡಿ, ಜ್ವರ ಕಾಣಿಸಿಕೊಳ್ಳುತ್ತದೆ. ಹೀಗೆ ಕಾಣಿಸಿಕೊಂಡ ಲಕ್ಷಣಗಳೆಲ್ಲವೂ ಕೊರೊನಾ ಜ್ವರವಲ್ಲ. ಹೀಗಾಗಿ ಜನರು ಅನವಶ್ಯಕ ಆತಂಕಪಡುವ ಅಗತ್ಯವಿಲ್ಲ. ಹಾಗೆಯೇ ನಿರ್ಲಕ್ಷ್ಯವೂ ಮಾಡಬಾರದು ಮಾಡದೇ ಕಾಳಜಿಯನ್ನೂ ಮಾಡಬೇಕಾಗುತ್ತದೆ. ಕೊರೊನಾ ನಡುವೆ ಮಳೆಗಾಲದಲ್ಲಿ ಶುರುವಾಗುವ ವೈರಲ್ ಫೀವರ್ ಭೀತಿ ಬಗ್ಗೆ ತಜ್ಞರು ಈಟಿವಿ ಭಾರತ್ ಜೊತೆಗೆ ಮಾತಾಡಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸಲಹೆಗಳನ್ನು ನೀಡಿದ್ದಾರೆ.
ವರ್ಷವಾರು ಪಟ್ಟಿ
ವರ್ಷ | ಮಲೇರಿಯಾ | ಡೆಂಗ್ಯೂ ಜ್ವರ (ಸಾವು) | ಚಿಕೂನ್ ಗುನ್ಯಾ |
2017 | 7,381 | 17,844 (10 ಸಾವು) | 3,511 |
2018 | 5,289 | 4,848 (4) | 2,951 |
2019 | 1,685 | 18,183 (17) | 3,994 |
2020 ಜುಲೈ ತನಕ | 757 | 2,455 (0) | 918 |
ಉದಾಸೀನ ಬೇಡ: ಡಾ.ಮಂಜುನಾಥ್
ಅನ್ಲಾಕ್-4 ನಂತರ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಕೊರೊನಾ ಸಮುದಾಯಕ್ಕೆ ಹರಡಿದ್ದು, ಹಲವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸರಿಯಾದ ಮಾಸ್ಕ್ ಹಾಕದೇ ಉದಾಸೀನ ಮಾಡುತ್ತಿದ್ದಾರೆ. ಹೀಗಿರುವಾಗ ಕೊರೊನಾ ಜೊತೆಗೆ ಡೆಂಗ್ಯೂ, ಹೆಚ್1ಎನ್1, ಟೈಫಾಯಿಡ್ ನಂತರ ವೈರಲ್ ಫೀವರ್ ಹೆಚ್ಚಾಗುತ್ತಿದೆ. ಹೀಗಾಗಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ವಯಸ್ಕರಲ್ಲಿ ಕಾಣಿಸಿಕೊಂಡರೆ ಶೇ.99ರಷ್ಟು ಗುಣಮುಖರಾಗಿ ಬಿಡುತ್ತಾರೆ. ಆದರೆ, ಅವರಿಂದ ಮಕ್ಕಳಿಗೆ ಹಾಗೂ ಇಳಿವಯಸ್ಸಿನವರಿಗೆ ಬಂದರೆ ಚೇತರಿಕೆ ಕಷ್ಟ ಎನ್ನುತ್ತಾರೆ ವಿಕ್ರಮ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಮತ್ತು ಜೆರಿಯಾಟ್ರಿಕ್ಸ್ ಡಾ.ಕೆ.ಎನ್.ಮಂಜುನಾಥ್. ಯಾವುದೇ ವೈರಲ್ ಫೀವರ್ ಆದರೂ ಒಮ್ಮೆ ಪರೀಕ್ಷಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ.
ಮಕ್ಕಳಿಗೆ ಕಾಡುವ ಮಾನ್ಸೂನ್ ಸೀಸನ್ ಕಾಯಿಲೆಗಳು
ಮಾನ್ಸೂನ್ ಸೀಸನ್ನಲ್ಲಿ ಬೆಂಬಿಡದೇ ಹಲವು ವೈರಲ್ ಫೀವರ್ಗಳು ಕಾಡುತ್ತವೆ. ಈ ಪರಿಸ್ಥಿತಿಯಲ್ಲಿ ಡೆಂಗ್ಯೂ, ಮಲೇರಿಯಾ, ಹೆಚ್1ಎನ್1 ಜ್ವರ ಇದ್ದರೂ ಕೊರೊನಾ ಇರಬಹುದಾ ಎಂದು ಜನರಲ್ಲಿ ಸಹಜವಾಗಿ ಗೊಂದಲ ಉಂಟಾಗಬಹುದು. ಹೀಗಾಗಿ, ರೋಗ ಬರುವ ಮೊದಲೇ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಫೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆಯ ಹೆಚ್ಓಡಿ ಡಾ.ಶ್ರೀನಾಥ್ ಮಣಿಕಂಠಿ ಹೇಳಿದರು.
ಮಾನ್ಸೂನ್ನಲ್ಲಿ ಮಕ್ಕಳಲ್ಲಿ ಹಲವು ಸಾಂಕ್ರಾಮಿಕ ಕಾಯಿಲೆಗಳು ಕಾಡಬಹುದು. ಇಂತಹ ಸಂದರ್ಭದಲ್ಲಿ ಹೆಚ್ಚು ಕಾಳಜಿ ಅಗತ್ಯ. ಸ್ವಚ್ಚತೆ ಕಾಪಾಡುವುದು, ಬಿಸಿಯಾದ ಆಹಾರ ಸೇವಿಸುವುದು, ಕೊರೊನಾ ಇರುವುದರಿಂದ ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆದುಕೊಳ್ಳುವುದು, ಮಳೆಗಾಲ ಇರುವುದರಿಂದ ಸೊಳ್ಳೆ ಬಾರದಂತೆ ಕಾಯಲ್ ಬಳಸುವುದು, ಪರದೆ ಹಾಕುವುದು, ಹೂ ಕುಂಡದಲ್ಲಿ ನೀರಿಲ್ಲದೇ ನೋಡಿಕೊಳ್ಳುವುದು ಎಲ್ಲ ಮಾಡಬೇಕು ಎಂದರು.
ಮುಂಜಾಗ್ರತಾ ಕ್ರಮಕ್ಕೆ ಸಿದ್ಧತೆ
ಇತ್ತ ಮಾನ್ಸೂನ್ ಹಿನ್ನೆಲೆ ಮಲೇರಿಯಾ, ಟೈಫಾಡ್, ಡೆಂಗ್ಯೂ, ಚಿಕ್ಯೂನ್‌ಗುನ್ಯಾ, ಹೆಚ್1ಎನ್1 ಜ್ವರ ಕಾಡುವ ಹಿನ್ನೆಲೆ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ನಿರ್ದೇಶಕ ಡಾ.ಪಾಟೀಲ್ ಓಂಪ್ರಕಾಶ್ ಆರ್.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ, ಹೆಚ್1ಎನ್1 ಸೇರಿದಂತೆ ಹಲವು ಸಾಂಕ್ರಾಮಿಕ ಕಾಯಿಲೆ ಪ್ರಕರಣಗಳು ಕಡಿಮೆಯಾಗಿವೆ. ಈಗಾಗಲೇ ಆಯಾ ಜಿಲ್ಲಾ ಆಸ್ಪತ್ರೆಗಳಿಗೆ ಗೈಡ್ಲೈನ್ಸ್ ನೀಡಲಾಗಿದೆ. ಕೊರೊನಾ ಇರುವ ಕಾರಣ ಇತರೆ ಸಾಂಕ್ರಾಮಿಕ ರೋಗಗಳ ಕಡೆಗಣನೆ ಮಾಡುವಂತಿಲ್ಲ. ಹೀಗಾಗಿ, ಜಿಲ್ಲಾಸ್ಪತ್ರೆಗಳ ಮುಖ್ಯಸ್ಥರಿಗೆ ಇದರ ಬಗ್ಗೆಯು ಗಮನಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.