ಬೆಂಗಳೂರು: ವಿಧಾನ ಪರಿಷತ್ನಲ್ಲಿ ಚರ್ಚೆ ಆರಂಭಿಸಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ನೆರೆ ಪರಿಹಾರದ ಅಂಕಿ- ಅಂಶ ಒದಗಿಸುವಂತೆ ಒತ್ತಾಯ ಮಾಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದವೂ ನಡೆಯಿತು.
ಅಕಾಲಿಕ ಮಳೆಯಿಂದ ನಷ್ಟ ಆಗುತ್ತಿದೆ. ನೆರೆಯಿಂದಾಗಿ 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. 2 ಲಕ್ಷ ಮನೆಗಳಿಗೆ ಹಾನಿ ಆಗಿದೆ. ಆದರೆ 5 ಸಾವಿರ ಮನೆಗಳಿಗೆ ಮಾತ್ರ ಪರಿಹಾರ ಹಣ ಬಿಡುಗಡೆ ಆಗಿದೆ ಎಂದು ಪ್ರಕಾಶ್ ರಾಥೋಡ್ ವಿವರಿಸಿದರು. ಈ ವೇಳೆ ಸಭಾಪತಿಗಳು ಮಧ್ಯ ಪ್ರವೇಶಿಸಿ, ಇನ್ನೂ 29 ಮಂದಿ ಮಾತನಾಡಬೇಕಿದೆ. ಮುಂದಿನವರಿಗೆ ಅವಕಾಶ ನೀಡಬೇಕು ಎಂದರು. ಆಗ ಪ್ರಕಾಶ್ ರಾಥೋಡ್ ಸದನವನ್ನು 3 ದಿನದ ಬದಲು, 15 ದಿನಕ್ಕೆ ವಿಸ್ತರಿಸಿ ಎಂದು ಸಲಹೆ ಇತ್ತರು. ಅಂತಿಮವಾಗಿ ಚರ್ಚೆಗೆ 5 ನಿಮಿಷ ಬದಲು, 10 ನಿಮಿಷ ಕಾಲಾವಕಾಶ ಕೊಡಬೇಕೆಂದು ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮನವಿ ಮಾಡಿದ್ದು, ಇದಕ್ಕೆ ಸಭಾಪತಿಗಳು ಸಮ್ಮತಿಸಿದರು.
![Vidhana Parishath session](https://etvbharatimages.akamaized.net/etvbharat/prod-images/kn-bng-04-vp-prakash-talk-script-9020923_11102019120249_1110f_1570775569_130.jpg)
ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ. ರವಿ, 1 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಆರೋಪಕ್ಕೆ ದಾಖಲೆ ಒದಗಿಸಿ ಎಂದಾಗ ಮತ್ತೆ ಗದ್ದಲ ಏರ್ಪಟ್ಟಿತು. ಪ್ರತಿಪಕ್ಷದ ನಾಯಕರು ವಾಗ್ವಾದ ನಡೆಸಿದರು. ನೆರೆ ಪರಿಹಾರದ ನಷ್ಟದ ಮೊತ್ತದ ವಿಚಾರವಾಗಿ ದೊಡ್ಡ ಚರ್ಚೆ ಗದ್ದಲದ ನಡುವೆ ನಡೆಯಿತು. 1 ಲಕ್ಷ ಕೋಟಿಗೂ ಅಧಿಕ ಮೊತ್ತದ ನಷ್ಟದ ಅಂದಾಜಿನ ದಾಖಲೆ ಒದಗಿಸುತ್ತೇನೆ ಎಂದು ಪ್ರಕಾಶ್ ರಾಥೋಡ್ ಅವರು ಸಿ.ಟಿ. ರವಿಗೆ ಒದಗಿಸುವ ಭರವಸೆ ನೀಡಿದರು.
ಪ್ರಾಣೇಶ್ ಮಧ್ಯ ಪ್ರವೇಶಿಸಿ ಅಂಕಿ ಅಂಶ ಒದಗಿಸಿ ಎಂದಾಗ ನಿಮಗೂ ದಾಖಲೆ ನೀಡುತ್ತೇನೆ ಎಂದರು. ಗಲಾಟೆ ಮುಂದುವರಿಯಿತು. ಕಾಂಗ್ರೆಸ್ ಪಕ್ಷದಿಂದ ಸಿದ್ಧಪಡಿದ ನೆರೆ ಸಮಸ್ಯೆಯ ವರದಿಯನ್ನೂ ಪ್ರಸ್ತಾಪಿಸಿದ ಪ್ರಕಾಶ್ ರಾಥೋಡ್ ಉತ್ತರಿಸುತ್ತಿರುವ ಮಧ್ಯೆಯೇ ಸಭಾಪತಿಗಳು ಕೆ.ಟಿ. ಶ್ರೀಕಂಠೇಗೌಡರಿಗೆ ಮಾತನಾಡಲು ಸೂಚಿಸಿದರು. ಪ್ರಕಾಶ್ ರಾಥೋಡ್ ಮಾತು ಮುಗಿಸುವ ಮುನ್ನ ಆದಷ್ಟು ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದರು.