ಬೆಂಗಳೂರು : 1971ರ ಯುದ್ಧದಲ್ಲಿ ಭಾರತದ ವಿಜಯವನ್ನು ಸಂಕೇತಿಸುವ ವಿಕ್ಟರಿ ಫ್ಲೇಮ್/ವಿಜಯ್ ಮಾಶಾಳ ಬೆಂಗಳೂರಿಗೆ ಬಂದು ತಲುಪಿದೆ.
ಕಳೆದ ವರ್ಷ ಡಿಸೆಂಬರ್ 16ರಂದು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಮಂತ್ರಿ ವಿಕ್ಟರಿ ಜ್ವಾಲೆ ಬೆಳಗಿಸಿದ್ದರು. ಜ್ವಾಲೆಯು ದೇಶದ ಉದ್ದಗಲದಲ್ಲೂ ಸಂಚರಿಸುತ್ತಿದೆ. ನಗರಗಳು ಮತ್ತು ಗ್ರಾಮಗಳ ಮೂಲಕ ಪ್ರಯಾಣ ನಿಗದಿಪಡಿಸಲಾಗಿದೆ.
1971ರ ಯುದ್ಧದ ಸಮಯದಲ್ಲಿ ಮಡಿದ ವೀರ ಯೋಧರನ್ನು ಹಾಗೂ ಪಾಕಿಸ್ತಾನದ ವಿರುದ್ಧ ಭಾರತದ 50 ವರ್ಷಗಳ ಅತ್ಯುತ್ತಮ ವಿಜಯದ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಕ್ಟರಿ ಜ್ವಾಲೆಯು ಸುಮಾರು 2,000 ಕಿ.ಮೀ ದೂರ ಪ್ರಯಾಣಿಸಿದ್ದು, ಬೆಂಗಳೂರಿಗೆ ಬಂದು ತಲುಪಿದೆ. ನಗರದಲ್ಲಿ ಜ್ವಾಲೆಗೆ ಮದ್ರಾಸ್ ಎಂಜಿನಿಯರ್ ಗ್ರೂಪ್ನ ಧೀರ ತಂಬಿಸ್ ಅದ್ಧೂರಿ ಸ್ವಾಗತ ಕೋರಿದರು. ಓಲ್ಡ್ ಮದ್ರಾಸ್ ರಸ್ತೆಯ ಮೂಲಕ ಬೆಂಗಾವಲಿನಲ್ಲಿ ಕರೆತರಲಾಯಿತು.
ಮದ್ರಾಸ್ ಎಂಜಿನಿಯರ್ ಗ್ರೂಪ್ ಪ್ರದೇಶದಲ್ಲಿರುವ ಯುದ್ಧ ಸ್ಮಾರಕದಲ್ಲಿ ಕರ್ನಾಟಕ ಮತ್ತು ಕೇರಳ ಉಪ ಪ್ರದೇಶದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಜೆ.ವಿ ಪ್ರಸಾದ್ ಜ್ವಾಲೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಲಾರ್ಪಣೆ ಮಾಡಿ ಮಡಿದ ವೀರ ಯೋಧರಿಗೆ ಹಿರಿಯ ಅಧಿಕಾರಿಗಳು ಮತ್ತು ನಿವೃತ್ತ ಯೋಧರು ಗೌರವ ಸಲ್ಲಿಸಲಾಯಿತು.
ವಿಕ್ಟರಿ ಜ್ವಾಲೆಯು ಮಾರ್ಚ್ 5ರವರೆಗೆ ಬೆಂಗಳೂರಿನಲ್ಲಿ ಇರುತ್ತಿದ್ದು 6ರಂದು ಕೊಯಮತ್ತೂರಿನ ಕಡೆಗೆ ಪ್ರಯಾಣ ಬೆಳಸಲಿದೆ. ಈ ಅವಧಿಯಲ್ಲಿ ಗೌರವದೊಂದಿಗೆ ಮತ್ತು ಸಂಕೇತವಾಗಿ ಎಲ್ಲಾ ಯೋಧರ ಮನೆಗಳಿಗೆ ಮತ್ತು ಮಡಿದ ಯೋಧರ ಕುಟುಂಬವಿರುವ ವಾಸ ಸ್ಥಳಗಳಿಗೆ ಕೊಂಡೊಯ್ಯಲಾಗುತ್ತದೆ.
ವೀರ ಮತ್ತು ಧೀರ ಯೋಧರಿಗೆ ಕೃತಜ್ಞತೆ ಸಲ್ಲಿಸಿ ಈ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ ಎಂದು ಸೈನ್ಯದ ಹಿರಿಯ ಅಧಿಕಾರಿಗಳು ತಿಳಿಸಿದರು.