ಆನೇಕಲ್(ಬೆಂ.ನಗರ ಜಿಲ್ಲೆ): ರೈತರು ಕಂಗಾಲಾಗುವ ಅವಶ್ಯಕತೆಯಿಲ್ಲ, ರೈತರ ಪರ ನಾವಿದ್ದೇವೆ. ಸರ್ಕಾರಗಳು ರೈತರ ವಿರುದ್ಧ ಹೀಗೆ ಮುಂದುವರಿದರೆ ಹೋರಾಟ ಮಾಡುವ ಮೂಲಕ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಕನ್ನಡ ಪರ ಚಳವಳಿಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕೃಷಿಕರಿಗೆ ಭರವಸೆ ನೀಡಿದ್ದಾರೆ.
ಭಾರತ್ ಬಂದ್ ಭಾಗವಾಗಿ ರೈತ-ಕಾರ್ಮಿಕರ ಜೊತೆ ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಬೆಂಬಲ ಸೂಚಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಎಲ್ಲರು ನೈತಿಕ ಬೆಂಬಲದೊಂದಿಗೆ ಮನೆಯಲ್ಲಿಯೇ ಇದ್ದು ವಂಚಿಸುತ್ತಾರೆ. ನಾವು ಹಾಗಲ್ಲ, ನೇರವಾಗಿಯೇ ನಿಮ್ಮೊಂದಿಗೆ ಹೋರಾಟಕ್ಕೆ ಸದಾ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ರೈತ ವಿರೋಧಿ ಕಾಯ್ದೆ ಹಿಂಪಡೆಯದಿದ್ದರೆ ಗಡಿ ಮುಚ್ಚುವ ಎಚ್ಚರಿಕೆ:
ಇದೇ ವೇಳೆ ಮಾತನಾಡಿದ ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಮಂಜುನಾಥ ದೇವ, ಕೇಂದ್ರ ಸರ್ಕಾರ ದೇಶದ ಬೆನ್ನೆಲುಬು ರೈತರ ಬೆನ್ನಿಗೆ ಚೂರಿ ಹಾಕಿದೆ. ಇದರಿಂದ ಜನ ಆಕ್ರೋಶಕ್ಕೆ ಒಳಗಾಗಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಹಿಂಪಡೆಯಬೇಕು, ವಿದ್ಯುತ್ ಇಲಾಖೆಯನ್ನು ಖಾಸಗೀ ಮಾಡುತ್ತಿರುವುದನ್ನು ಹಿಂಪಡೆಯದಿದ್ದರೆ ಕರ್ನಾಟಕ - ತಮಿಳುನಾಡು ಗಡಿ ಮುಚ್ಚುವ ಮೂಲಕ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್ ಪೊಲೀಸರ ವಶಕ್ಕೆ
ಭಾರತ್ ಬಂದ್ ಬೆಂಬಲಿಸಿ ಕನ್ನಡ ಪರ ಸಂಘಟನೆಗಳು ರಾಜ್ಯದ ಗಡಿ ಅತ್ತಿಬೆಲೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಕೆ.ಮಂಜುನಾಥ ದೇವ, ಪ್ರಾಂತ ರೈತ ಸಂಘದ ಹುಸ್ಕೂರು ರಘು ಸೇರಿ ಹಲವು ಹೋರಟಗಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.