ಬೆಂಗಳೂರು: ಗ್ಯಾಸ್ ಬೆಲೆ ಏರಿಕೆಗೆ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದು, ಇಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಾಲಿ ಸಿಲಿಂಡರ್ ಇಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಜನರ ಪರಿಸ್ಥಿತಿಯನ್ನು ನೋಡಿ ನೋವಾಗುತ್ತದೆ. ಜನರಿಗಾಗಿ ಹೋರಾಟ ಮಾಡಿ ನನ್ನ ಜೀವನವನ್ನು ಅರ್ಪಣೆ ಮಾಡಿದ್ದೇನೆ. ನನ್ನದು ನಿತ್ಯ, ನಿರಂತರ ಹೋರಾಟ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದರು ಕೂಡ ಜನರು ಆರಾಮಾಗಿ ಕುಳಿತಿದ್ದಾರೆ. ಆದರೆ ಜನರಿಗೆ ಅನ್ಯಾಯವಾದ್ರೆ ನಾನು ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 6 ತಿಂಗಳಲ್ಲಿ ಎಲ್ಲಾ ಅಗತ್ಯ ವಸ್ತುಗಳ ದರ ಏರಿಕೆ ಮಾಡಲಾಗಿದೆ. ಸರ್ಕಾರ ಒಂದು ಕಡೆ ಕೊರೊನಾ ಪ್ಯಾಕೇಜ್ ಕೊಟ್ಟು ಮತ್ತೊಂದು ಕಡೆ ತೆರಿಗೆ ಹಾಕುವ ಮೂಲಕ ಹಣ ವಸೂಲಿ ಮಾಡುತ್ತಿದೆ. ಕೇಂದ್ರದ ವಿರುದ್ಧ ಜನಸಾಮಾನ್ಯರು ಮಾತನಾಡಬೇಕು. ದರ ಏರಿಕೆಯನ್ನು ಹಿಂಪಡೆಯದಿದ್ದರೆ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.