ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸಜಾಬಂಧಿ ಕೈದಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಜೈಲು ಹಕ್ಕಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಚಿತ್ರಕಲೆ, ಗಾಯನ ಸೇರಿದಂತೆ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನ ಏರ್ಪಡಿಸಲಾಗಿತ್ತು. ಇನ್ನು, ಈ ಸ್ಪರ್ಧೆಯಲ್ಲಿ ಸಜಾಬಂಧಿ ಕೈದಿಗಳು ಉತ್ಸಾಹದಿಂದ ಚಿತ್ರ ಬರೆದು, ಹಾಡಿ ಬಹುಮಾನ ಪಡೆದರು.
ವಿಶೇಷ ಅಂದ್ರೆ ಡ್ರಗ್ಸ್ ಕೇಸ್‌ನಲ್ಲಿ ಜೈಲಿನಲ್ಲಿರುವ ನೈಜೀರಿಯನ್ಸ್ ಕೂಡ ಪ್ರತಿಭಾ ಕಾರಂಜಿಯಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಚಿತ್ರಕಲಾ ಸ್ಪರ್ಧೆಯಲ್ಲಿ ಸಜಾಬಂಧಿ ಕೈದಿಗಳ ಜೊತೆ ನೈಜೀರಿಯನ್ಸ್ ಕೂಡ ಭಾಗವಹಿಸಿದ್ರು.
ಒಟ್ಟು 42 ಮಂದಿ ಕೈದಿಗಳು ವಿವಿಧ ಸ್ಪರ್ದೆಯಲ್ಲಿ ಉತ್ಸಾಹದಿಂದ ಭಾಗಿಯಾಗಿ, ವಿಭಿನ್ನವಾಗಿ ಚಿತ್ರಗಳನ್ನ ಬಿಡಿಸಿ ಜೈಲಾಧಿಕಾರಿಗಳನ್ನೇ ಅಚ್ಚರಿಗೊಳಿಸಿದರು. ಭಾರತ ಮಾತೆ, ಡಾ.ಬಿ. ಆರ್. ಅಂಬೇಡ್ಕರ್, ಪರಿಸರ, ಗಾಂಧೀಜಿ, ಬುದ್ಧ, ವಿಷ್ಣು, ಕೃಷ್ಣ, ಬಾಲಕೃಷ್ಣ, ಹಳ್ಳಿ ಪರಸರ ಸೇರಿದಂತೆ ಅನೇಕ ಚಿತ್ರಗಳನ್ನ ಕೈದಿಗಳು ಬಿಡಿಸಿದರು.
ಐಜಿಪಿ ನಂಜುಂಡಸ್ವಾಮಿಯವರು ಚಿತ್ರಗಳ ವೀಕ್ಷಣೆ ಮಾಡಿ ಬಹುಮಾನ ನೀಡಿದ್ರು. ಅಂಬೇಡ್ಕರ್ ಚಿತ್ರ ಬಿಡಿಸಿ ಸಂವಿಧಾನದ ಬಗ್ಗೆ ಬರೆದಿದ್ದ ಮಹಿಳಾ ಕೈದಿಗೆ ಪ್ರಥಮ ಬಹುಮಾನ ನೀಡಲಾಯಿತು.