ಬೆಂಗಳೂರು: ದೇಶದಲ್ಲಿ ಕೊರೊನಾ ನಿರ್ಮೂಲನೆಗೆ ಸಂಬಂಧಿಸಿದಂತೆ ಪ್ರಯತ್ನ ಮತ್ತು ಪ್ರಯೋಗ ಅಗಾಧ ಮಟ್ಟದಲ್ಲಿ ನಡೆದಿದೆ. ಕೋವ್ಯಾಕ್ಸಿನ್ ನಮ್ಮ ದೇಶದ ಹೆಮ್ಮೆಯಾಗಿದೆ. ಸದ್ಯದಲ್ಲೇ ಲಸಿಕೆ ಕೊರತೆ ನೀಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜ್ಞಾಪ್ರವಾಹ ಆಯೋಜಿಸಿದ್ದ ಕೋವಿಡ್-19 ಆತ್ಮನಿರ್ಭರತೆ, ವಿಶ್ವಬಂಧುತ್ವ ಮತ್ತು ರಾಜಕಾರಣ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆಯ ಫಾರ್ಮುಲಾ ನಮ್ಮ ಬಳಿ ಇಲ್ಲ. ಆದರೆ ಉತ್ಪಾದನಾ ಸಾಮರ್ಥ್ಯ ನಮ್ಮ ಬಳಿ ಇದೆ. ಇಲ್ಲಿ ತಯಾರಾಗುವ ಲಸಿಕೆಯ ಶೇ 70-80 ನಮ್ಮ ಜನರಿಗೆ ಸಿಗುತ್ತಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ತಯಾರಿಸಿದ ಕೊವ್ಯಾಕ್ಸಿನ್ ನಮ್ಮ ದೇಶದ ಹೆಮ್ಮೆ. ಉತ್ಪಾದನಾ ಮಿತಿಗಳ ಕಾರಣದಿಂದಾಗಿ ಲಸಿಕೆ ಕೊರತೆ ಉಂಟಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ಕೊರತೆ ನೀಗಲಿದೆ ಎಂದರು.
ಲಸಿಕೆ ವಿಷಯದಲ್ಲಿ ಕೆಲವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರು. ಬಿಜೆಪಿ ಲಸಿಕೆ ಎಂದು ಕರೆದರು. ಮೊದಲು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ನಿರ್ಧಾರವನ್ನು ಕೇಂದ್ರ ತೆಗೆದುಕೊಂಡಿತು. ನಂತರ ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. ಮೊದಲು ಇವರಿಗೆ ಲಸಿಕೆ ನೀಡಿದ ಕಾರಣದಿಂದ 2 ನೇ ಅಲೆಯ ವೇಳೆ ದೇಶದಲ್ಲಿ ದಾದಿಯರ, ವೈದ್ಯರ ಕೊರತೆ ಉಂಟಾಗಿಲ್ಲ. ಇಲ್ಲವಾದರೆ ಇವರ ಜೀವಕ್ಕೂ ಅಪಾಯವಿತ್ತು ಎಂದು ಹೇಳಿದರು.
ಕೆಲವರು ನಮ್ಮ ಮಕ್ಕಳ ಲಸಿಕೆಯನ್ನು ಯಾಕೆ ಬೇರೆ ದೇಶಗಳಿಗೆ ನೀಡಿದಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಆರಂಭದಲ್ಲಿ 32 ಸಾವಿರ ಕೋಟಿ ರೂ. ಲಸಿಕೆಗಾಗಿ ಕೇಂದ್ರ ಸರ್ಕಾರ ಮೀಸಲಿಟ್ಟ ಸಂದರ್ಭದಲ್ಲಿ ಪ್ರಶಾಂತ್ ಭೂಷಣ್ ಅಂಥವರು ಲಸಿಕೆಗೆ ಇಷ್ಟು ಮೊತ್ತ ನೀಡುವ ಅಗತ್ಯವೇನು ಎಂದು ಪ್ರಶ್ನಿಸಿದ್ದರು. ದೇಶದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ, ಇನ್ನು ಮುಂದೆ ಕೊರೊನಾ ಬರುವುದಿಲ್ಲ, ಹೀಗಾಗಿ ಲಸಿಕೆಯ ಅವಶ್ಯಕತೆ ಇಲ್ಲ, ಹಣವನ್ನು ಕಾರ್ಮಿಕರಿಗೆ ನೀಡಿ ಎಂದು ವಾದಿಸಿದ್ದರು.
ಕೆಲವರು ಲಸಿಕೆ ವಿಷಯದಲ್ಲಿ ರಾಜ್ಯಗಳಿಗೆ ಸ್ವಾತಂತ್ರ ಬೇಕು ಎಂದು ವಾದಿಸಿದರು. ಖರೀದಿ ಸ್ವಾತಂತ್ರ್ಯ ನೀಡಿದಾಗ ಹೊಣೆಗಾರಿಕೆ ನಿಭಾಯಿಸಲು ಸಾಧ್ಯವಿಲ್ಲದೆ ಕೈಚೆಲ್ಲಿದರು. ಪಿಎಂ ಕೇರ್ಸ್ ಬಗ್ಗೆ ಅಪಪ್ರಚಾರವನ್ನು ಮಾಡಿದರು. ಆದರೆ ಇಂದು ವೆಂಟಿಲೇಟರ್, ಮಾಸ್ಕ್, ಲಸಿಕೆ ಮುಂತಾದವುಗಳಿಗೆ ಪಿಎಂ ಕೇರ್ಸ್ ದೊಡ್ಡಮಟ್ಟದ ಸಹಾಯ ಮಾಡುತ್ತಿದೆ. ಪ್ರಧಾನಿ ಅವರಿಗೆ ಸಿಗುತ್ತಿರುವ ಬೆಂಬಲದ ಕಾರಣದಿಂದಾಗಿ ಕೆಲವರು ಪಿಎಂ ಕೇರ್ಸ್ ಬಗ್ಗೆ ಅಸೂಯೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಾಕಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ದೇಶದೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಬದಲು ಟೂಲ್ ಕಿಟ್ ಮೂಲಕ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸುವ ಕಾರ್ಯವನ್ನು ಪ್ರತಿಪಕ್ಷ ನಡೆಸುತ್ತಿದೆ. ಜೀವಹಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಯಾವ ಸರ್ಕಾರಗಳೂ ಕಾರ್ಯನಿರ್ವಹಿಸುತ್ತಿಲ್ಲ. ಕೆಲವೊಂದು ಸರ್ಕಾರಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯ ಸರ್ಕಾರಗಳು ತಮ್ಮ ಶಕ್ತಿಯನ್ನು ಮೀರಿ ಪ್ರಯತ್ನ ನಡೆಸುತ್ತಿವೆ. ಕೆಲವರು ಮಾನವೀಯತೆಗಾಗಿ ಸಹಾಯ ಮಾಡುತ್ತಿದ್ದಾರೆ. ದೇಶದ ಹಲವಾರು ಮಠ-ಮಂದಿರಗಳು ಸಾಂಕ್ರಾಮಿಕದಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಆಶ್ರಯ ನೀಡಲು ಮುಂದಾಗಿವೆ. ಅನೇಕ ಸಂಸ್ಥೆಗಳು ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನೆರವಾಗುತ್ತಿದೆ. ನಾವು ನೆರವಿನ ಭಾಗವಾಗಬೇಕೇ ಹೊರತು, ವಿವಾದದ ಭಾಗವಾಗಬಾರದು ಎಂದರು.
ಒಮ್ಮನಸ್ಸಿನಿಂದ ದೇಶಕ್ಕಾಗಿ ಸಹಾಯ ಮಾಡಬೇಕು. ಸೋಂಕಿತರ ಮನೆಗಳಿಗೆ ನೆರವು ನೀಡುವುದು, ವಿಜ್ಞಾನಿಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುವುದು ಕೂಡ ನೆರವಿನ ಭಾಗ. ಪ್ರಸ್ತುತ ದೇಶದ ಉತ್ಪಾದನೆಯೂ ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ ನಾವು ಸಮಾಜವಾಗಿ ಸರ್ಕಾರ, ಆಸ್ಪತ್ರೆಗಳು, ವೈದ್ಯರ ಜೊತೆ ಕೈಜೋಡಿಸಬೇಕು. ಅವಿರತವಾಗಿ ಶ್ರಮಿಸುತ್ತಿರುವ ದಾದಿಯರು, ವೈದ್ಯರು, ವಿಜ್ಞಾನಿಗಳು, ದಿನಕ್ಕೆ ನೂರಾರು ಪರೀಕ್ಷೆಗಳನ್ನು ಮಾಡುವ ಲ್ಯಾಬ್ ಟೆಕ್ನಿಷಿಯನ್ ಇಂದು ನಮ್ಮ ಕಣ್ಣ ಮುಂದೆ ಇರುವ ಜೀವಂತ ದೇವರುಗಳು. ಕೊರೊನಾದ ಈ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯ ಪ್ರವಾಹವೇ ಹರಿದು ಬರುತ್ತಿದೆ. ಈ ಎಲ್ಲಾ ಸುದ್ದಿಗಳು ಸತ್ಯ ಎಂಬ ಭ್ರಮೆಯಿಂದ ನಾವು ಹೊರಬರಬೇಕು. ಸತ್ಯವನ್ನು ಪರಾಮರ್ಶೆ ಮಾಡಬೇಕು ಎಂದರು.
ಕೆಲವರು ಕುಂಭಮೇಳ ಮತ್ತು ಚುನಾವಣಾ ಸಮಾವೇಶಗಳು ಕೊರೊನಾ ಸೋಂಕು ಹೆಚ್ಚಾಗಲು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ ಮಹಾರಾಷ್ಟ್ರ, ದೆಹಲಿಯಂತಹ ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡ ರಾಜ್ಯಗಳಲ್ಲಿ ಯಾವುದೇ ಚುನಾವಣೆ ಅಥವಾ ಕುಂಭಮೇಳ ಇರಲಿಲ್ಲ ಎಂಬುದು ಸತ್ಯ. ಪ್ರಸ್ತುತ ದೇಶದಲ್ಲಿ 2 ನೇ ಅಲೆ ತಗ್ಗುತ್ತಿದೆ. ಸಮಸ್ಯೆ ನಿಯಂತ್ರಣದಲ್ಲಿದೆ, ಹಾಗಂತ ಸಮಸ್ಯೆ ಪರಿಹಾರವಾಗಿದೆ ಎಂದು ಅರ್ಥವಲ್ಲ. ಪರಿಹಾರ ಇನ್ನೂ ದೂರವಿದೆ. ಕೆಲವರು ಪರೀಕ್ಷೆಗಳನ್ನು ಕಡಿಮೆ ಮಾಡಿದ ಕಾರಣದಿಂದ ಸೋಂಕು ಕಡಿಮೆ ದಾಖಲಾಗುತ್ತಿದೆ ಎಂಬ ವಾದ ಮಾಡುತ್ತಿದ್ದಾರೆ, ಆದರೆ ಒಟ್ಟು ಸನ್ನಿವೇಶವನ್ನು ಗಮನಿಸಿದಾಗ ಸೋಂಕು ಕಡಿಮೆ ಆಗಿದೆ ಎಂಬುದೂ ಸತ್ಯ ಎಂದು ವಿಶ್ಲೇಷಿಸಿದ್ದಾರೆ.
ಕೆಲವರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಹಗರಣ ಮಾಡಲು ಪ್ರಯತ್ನಿಸಿದರು. ಬೆಂಗಳೂರಿನಲ್ಲಿ ಹಗರಣದ ರಾಜಕೀಕರಣಗೊಳಿಸುವ ಪ್ರಯತ್ನಗಳು ನಡೆದವು. ದೇಶದಲ್ಲಿ ಈಗಲೂ ಆಮ್ಲಜನಕ, ಐಸಿಯು ಸಮಸ್ಯೆ ಇದೆ. ಹಾಗಂತ ಹಾಹಾಕಾರ ಇಲ್ಲ. ದಿನಕ್ಕೆ ಬೇಕಾದಷ್ಟು ಆಮ್ಲಜನಕ ಪೂರೈಕೆ ಆಗುತ್ತಿದೆ. ವೈದ್ಯರೊಬ್ಬರು ಹೇಳಿದ ಪ್ರಕಾರ, ಇನ್ನು ಎರಡು ವರ್ಷ ಕೊರೊನಾಗೆ ಸಂಬಂಧಿಸಿದಂತೆ ಸೋಶಿಯಲ್ ವ್ಯಾಕ್ಸಿನ್, ಬಯೋ ವ್ಯಾಕ್ಸಿನ್ ಅತೀ ಮುಖ್ಯ. ಸೋಶಿಯಲ್ ವ್ಯಾಕ್ಸಿನ್ ಅಂದರೆ ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್. ಬಯೋ ವ್ಯಾಕ್ಸಿನ್ ಅಂದರೆ ಕೊರೊನಾ ವಿರುದ್ಧ ನಾವು ಪಡೆಯುತ್ತಿರುವ ಲಸಿಕೆ. ನಾವು ಸಾಮಾಜಿಕ ನಡವಳಿಕೆಯಲ್ಲಿ ಎಡವಿದ್ದೇ ಎರಡನೇ ಅಲೆಗೆ ಕಾರಣವಾಯಿತು. ಆದರೆ ಇನ್ನು ಮುಂದೆ ಎರಡು ವರ್ಷಗಳ ಕಾಲ ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸುವುದು ಅತ್ಯಾವಶ್ಯಕ ಎಂದು ಪ್ರತಿಪಾದಿಸಿದರು.
ಪ್ರಸ್ತುತ ದೇಶದಲ್ಲಿ ಉಸಿರುಗಟ್ಟಿದ ವ್ಯವಸ್ಥೆ ಇದೆ ಎಂಬುದು ನಿಜ. ಬೇಕಾದ ಹಾಗೆ ತಿರುಗಾಡಲು, ಬೇಕಾದ ಹಾಗೆ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಣ್ಣ ವ್ಯಾಪಾರಿಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೆಲವರು ಸರ್ಕಾರ ಎಡವಿದೆ ಎನ್ನುತ್ತಾರೆ. ಆದರೆ ಇದರಲ್ಲಿ ಸತ್ಯಾಂಶವಿಲ್ಲ. ಕೇಂದ್ರ ಸರ್ಕಾರ, ಟಾಸ್ಕ್ ಫೋರ್ಸ್, ಅನೇಕ ತಜ್ಞರು ಕಾಲಕಾಲಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಆದರೆ ಇದರ ಪಾಲನೆ ಸರಿಯಾಗಿ ಆಗಲಿಲ್ಲ ಎಂದು ವಿಷಾದಿದರು.
ಬ್ರಿಟಿಷ್ ವೇರಿಯಂಟ್ ಭಾರತದಲ್ಲಿ ಕಾಣಿಸಿಕೊಂಡಿತು. ಇದರ ಭಾರತ ರೂಪಾಂತರವೂ ಇದ್ದು, ಇದಕ್ಕೂ ವಿಜ್ಞಾನಿಗಳು ಕೋಡ್ ಕೊಟ್ಟಿದ್ದಾರೆ. ರೂಪಾಂತರಗಳಿಗೆ ದೇಶ ಕಾರಣವಾಗುವುದಿಲ್ಲ. ವಿಜ್ಞಾನಿಯೊಬ್ಬರು ಹೇಳಿದ ಪ್ರಕಾರ, ಈ ಸಾಂಕ್ರಾಮಿಕವನ್ನು 15 ದಿನಗಳಿಗಿಂತ ಹೆಚ್ಚು ಉಹಿಸಲು ಸಾಧ್ಯವಿಲ್ಲ. ಅದು ರೂಪಾಂತರಗೊಳ್ಳುತ್ತಾ ಇರುತ್ತದೆ. ಹಿಂದೆ ನಾವು ಕೇಳದ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿದೆ ಎಂದರು.
ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಆಮ್ಲಜನಕವನ್ನು ವೃದ್ಧಿಸುವ ಪ್ರಯತ್ನ ಮಾಡುವಂತೆ ಸೂಚಿಸಿತ್ತು. ಆದರೆ ಯಾವ ರಾಜ್ಯಗಳು ಕೂಡ ಈ ಬಗ್ಗೆ ಗಮನ ನೀಡಲಿಲ್ಲ. ಆ ಸಂದರ್ಭದಲ್ಲೇ ಕೇಂದ್ರವು ಪಿಎಂ ಕೇರ್ಸ್ ಫಂಡ್ ಮೂಲಕ ಚಿಕ್ಕ ಮಟ್ಟದ 156 ಪಿಎಸ್‌ಎ ಪ್ಲಾಂಟ್‌ಗಳನ್ನು ಹಂಚಿಕೆ ಮಾಡಿತ್ತು. ಆದರೆ ಅನೇಕ ರಾಜ್ಯಗಳು ಇದನ್ನು ಅಳವಡಿಸಿಯೇ ಇರಲಿಲ್ಲ. ದೆಹಲಿಗೆ 8 ಪಿಎಸ್ ಪ್ಲಾಂಟ್ ನೀಡಲಾಗಿತ್ತು. ಆದರೆ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಒಂದು ಮಾತ್ರ ಕಾರ್ಯಾರಂಭ ಮಾಡಿತು. ಕೇಂದ್ರ ಸರ್ಕಾರವು ವೆಂಟಿಲೇಟರ್‌ಗಳ ಮೌಲ್ಯಮಾಪನಕ್ಕೆ ಆದೇಶಿಸಿದ ಬಳಿಕ ವೆಂಟಿಲೇಟರ್ ಇಲ್ಲ ಎಂಬ ಕೆಲವರ ಆಪಾದನೆ ತಗ್ಗಿತು.
ಕೇಂದ್ರ ಸರ್ಕಾರದ ಪ್ರಯತ್ನಗಳ ಫಲವಾಗಿ ಎರಡನೇ ಅಲೆಯ ಸಂದರ್ಭ ಪಿಪಿಇ ಕಿಟ್, ಸ್ಯಾನಿಟೈಸರ್, ಎನ್ 95 ಮಾಸ್ಕ್, ಪರೀಕ್ಷೆ ನಡೆಸುವ ಕಿಟ್ ಮುಂತಾದ ಅಗತ್ಯ ವಸ್ತುಗಳಿಗೆ ಕೊರತೆ ಉಂಟಾಗಲಿಲ್ಲ ಎಂದು ಕೇಂದ್ರವನ್ನು ಸಮರ್ಥಿಸಿಕೊಂಡರು.
ಸಮಸ್ಯೆ ತೀವ್ರವಾಗಿ ಹೆಚ್ಚಾದಾಗ ಔಷಧಿಯ ಕೊರತೆಯಾಯಿತು. ಅನಗತ್ಯವಾಗಿ ರೆಮಿಡ್‌ಸ್ಟರ್ ಬೇಡಿಕೆ ಹೆಚ್ಚಾಯಿತು.ಕೇಂದ್ರ ಸರ್ಕಾರ 18 ಲಕ್ಷ ವಯಲ್ಸ್ ರೆಮಿಡ್‌ಸ್ಟಿರ್ ಬಿಡುಗಡೆ ಮಾಡಿದೆ. ಇಂದು ದೇಶದ 35 ಕ್ಕಿಂತಲೂ ಹೆಚ್ಚು ಕಂಪನಿಗಳು ಔಷಧಿಯನ್ನು ತಯಾರು ಮಾಡುತ್ತಿವೆ. ಪ್ರಸ್ತುತ ಕಾಣಿಸಿಕೊಂಡಿರುವ ಕಪ್ಪು ಶಿಲೀಂದ್ರಕ್ಕೆ ಸಂಬಂಧಿಸಿದ ಔಷಧಿಯ ಸಮಸ್ಯೆ ಇದೆ ಎಂಬುದು ನಿಜ. ಇದರ ದೇಶೀಯ ಉತ್ಪಾದನೆ ಮತ್ತು ಆಮದು ಪ್ರಕ್ರಿಯೆ ಕೂಡ ನಡೆಯುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದರು.
ಅವಶ್ಯಕತೆ ಹೆಚ್ಚಾಗಿದ್ದು, ಅನವಶ್ಯಕ ಉಪಯೋಗ ಮಾಡಿದ್ದು ದೇಶದಲ್ಲಿ ಆಮ್ಲಜನಕದ ಕೊರತೆ ಉಂಟಾಗಲು ಕಾರಣವಾಯಿತು. ಉಪಯೋಗ ಇಲ್ಲದ ವಸ್ತುಗಳನ್ನು ನಾವು ಮನೆಯಲ್ಲೇ ಇಟ್ಟುಕೊಳ್ಳುವುದಿಲ್ಲ, ದೇಶವೂ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ನಮ್ಮ ದೇಶಕ್ಕೆ 5,700 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗುತ್ತಿತ್ತು. ಕೊರೋನಾ 2 ನೇ ಅಲೆಯ ಬಳಿಕ ಆಮ್ಲಜನಕದ ಬೇಡಿಕೆ ಏಕಾಏಕಿ ಹೆಚ್ಚಾಯಿತು. ಇದರಿಂದ ಹಾಹಾಕಾರ ಉಂಟಾಯಿತು. ಸರ್ಕಾರ ಸರ್ವ ಪ್ರಯತ್ನಗಳನ್ನೂ ನಡೆಸಿ ಕೊರತೆ ನೀಗಿಸುವ ಕಾರ್ಯ ಮಾಡಿತು ಎಂದರು.