ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಸಂಗೊಳ್ಳಿ ರಾಯಣ್ಣ ಉದ್ಯಾನವನ ಅವರಣದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಧನದ ಚೆಕ್ ಮತ್ತು ಮಂಜೂರಾತಿ ಆದೇಶ ಪತ್ರವನ್ನ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಹಾಗೂ ಡಾ. ಅರುಣ್ ಸೋಮಣ್ಣ ವಿತರಿಸಿದರು.
ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ, ವಾಗೀಶ್ ರಾಮಪ್ಪ, ದಾಸೇಗೌಡ, ಜಯರತ್ನ, ರೂಪ ಲಿಂಗೇಶ್ವರ್ ಮತ್ತು ಸ್ಲಂ ಬೋರ್ಡ್ ನಿರ್ದೇಶಕ ಕ್ರಾಂತಿರಾಜು ಪಾಲ್ಗೊಂಡಿದ್ದರು. ಈ ವೇಳೆ ಭಾರತೀಯ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಮತ್ತು ದುರಂತದಲ್ಲಿ ಮಡಿದ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಿ 2ನಿಮಿಷ ಮೌನಾಚರಣೆ ಮಾಡಲಾಯಿತು.
ನಿಮ್ಮ ಜೊತೆ ನಾವಿದ್ದೇವೆ : ಈ ವೇಳೆ ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಕೊರೊನಾ ಎರಡನೇ ಅಲೆಯಿಂದ ಮೃತಪಟ್ಟವರ ಕುಟುಂಬದವರ ನೋವಿಗೆ ಸ್ಪಂದಿಸುವ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆ ಮತ್ತು ರಾಜ್ಯ ಸರ್ಕಾರದ ದಿಟ್ಟ ನಿಲುವು ಕ್ರಮಗಳಿಂದ ಕೋವಿಡ್ ಸಾಂಕ್ರಾಮಿಕ ರೋಗ ಹತೋಟಿಯಲ್ಲಿದೆ. ಕೋವಿಡ್ ಸೋಂಕಿನ ಭಯ ಮತ್ತು ಅಂಜಿಕೆಪಟ್ಟು ಸಾಕಷ್ಟು ಜನರು ಮೃತಪಟ್ಟರು. ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದರು. ನೋವಿನಲ್ಲಿ, ಕಣ್ಣೀರಿನಲ್ಲಿ ಜೀವನ ಸಾಗಿಸುವ ಕುಟುಂಬಕ್ಕೆ ಆಸರೆಯಾಗಬೇಕು ಮತ್ತು ನಿಮ್ಮ ಕುಟುಂಬದ ಜೊತೆಯಲ್ಲಿ ನಾವಿದ್ದೇವೆ ಎಂದು ಅಭಯ ನೀಡಿದರು.
ಬಿಪಿಎಲ್ ಕಾರ್ಡ್ದಾರರ ಕುಟುಂಬಕ್ಕೆ ₹1.50ಲಕ್ಷ ಚೆಕ್ ಮತ್ತು ಎಪಿಎಲ್ ಕುಟುಂಬದವರಿಗೆ ₹50ಸಾವಿರ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 65 ಹಾಸಿಗೆ ಸಾಮ್ಯರ್ಥವುಳ್ಳ ಐಸಿಯು ಆಸ್ಪತ್ರೆ ನಿರ್ಮಿಸಲಾಗಿದೆ ಮತ್ತು ಕಿಡ್ನಿಗೆ ಸಂಬಂಧಿಸಿದ ರೋಗಿಗಳಿಗೆ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದರು.
ಕಣ್ಣೀರು ಹಾಕಿದ ಸೋಮಣ್ಣ : ಕೊರೊನಾ ಎರಡನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಎಂದು 70ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಸೋಂಕಿತರ ಮನೆಗಳಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಕೊವಿಡ್-19ರಿಂದ ಮೃತಪಟ್ಟ ತಂದೆ, ತಾಯಿ ಇಲ್ಲದ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕೆ ಸಹಾಯ ಮಾಡಲಾಯಿತು ಎಂದ ಸೋಮಣ್ಣ, ಈ ವೇಳೆ ಕೋವಿಡ್ ಪರಿಹಾರ ಧನ ವಿತರಣಾ ಕಾರ್ಯಕ್ರಮದಲ್ಲಿ ಸಂಬಂಧಿಕರು, ಸ್ನೇಹಿತರು, ಕ್ಷೇತ್ರದ ಹಲವಾರು ಜನರು ಕೊವಿಡ್ ಸೋಂಕಿನಿಂದ ಮೃತಪಟ್ಟಿರುವುದನ್ನ ನೆನೆದು ಕಣ್ಣೀರು ಹಾಕಿದರು.