ಬೆಂಗಳೂರು : ಹೈಕೋರ್ಟ್ ನೀಡಿದ ಆದೇಶದ ನಂತರವೂ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಿಜಾಬ್ ಗೊಂದಲ ಮುಂದುವರೆದಿದ್ದು, ಇದನ್ನು ನಿವಾರಿಸಬೇಕು ಎಂದು ಕಾಂಗ್ರೆಸ್ ಉಪನಾಯಕ ಯು.ಟಿ.ಖಾದರ್ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಹಿಜಾಬ್ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡುವಾಗ ಕಾಲೇಜು ಅಭಿವೃದ್ಧಿ ಸಮಿತಿಗಳು ಈ ಕುರಿತು ಕೈಗೊಳ್ಳುವ ತೀರ್ಮಾನಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ. ಆದರೆ, ಕಾಲೇಜು ಅಭಿವೃದ್ಧಿ ಸಮಿತಿಗೆ ಈ ಸೂಚನೆಯನ್ನು ನ್ಯಾಯಾಲಯ ನೀಡಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಗೊಂದಲ ಉಂಟಾಗಿದೆ.
ಕಾಲೇಜು ಮಟ್ಟದಲ್ಲಿ ನ್ಯಾಯಾಲಯದ ಈ ಆದೇಶ ಅನ್ವಯವಾಗುತ್ತದೆಯೇ ಹೊರತು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಟ್ಟದಲ್ಲಿ ಅಲ್ಲ ಎಂದು ವಿದ್ಯಾರ್ಥಿಗಳು ಭಾವಿಸಿದ್ದಾರೆ. ಪರಿಣಾಮವಾಗಿ ರಾಜ್ಯದಲ್ಲಿ ಹಿಜಾಬ್ ಕುರಿತಂತೆ ಗೊಂದಲ ಇನ್ನೂ ಹಾಗೇ ಮುಂದುವರೆದಿದೆ. ತಕ್ಷಣವೇ ಈ ಗೊಂದಲಗಳನ್ನು ಪರಿಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ಈ ಗೊಂದಲ ಮುಂದುವರಿದು ಮೊದಲೇ ಹಾಳಾಗಿರುವ ಮಕ್ಕಳ ವ್ಯಾಸಂಗಕ್ಕೆ ಮತ್ತೆ ಅಡ್ಡಿಯಾಗಲಿದೆ ಎಂದು ಖಾದರ್ ಹೇಳಿದ್ದಾರೆ.
ಹಿಜಾಬ್ ಹಾಕಿಕೊಂಡು ಬಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಿಪರೇಟರಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂಬ ದೂರು ಶಿವಮೊಗ್ಗದಿಂದಲೇ ಕೇಳಿ ಬಂದಿದೆ. ಹೀಗಾಗಿ ಈ ಕುರಿತು ವಿದ್ಯಾರ್ಥಿಗಳಲ್ಲಿರುವ ಗೊಂದಲವನ್ನು ಪರಿಹರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯ ಯು.ಟಿ.ಖಾದರ್ ಅವರ ಆಗ್ರಹಕ್ಕೆ ಶಿಕ್ಷಣ ಸಚಿವರ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಏನೇ ಗೊಂದಲವಿದ್ದರೂ ಹೈಕೋರ್ಟ್ ಆದೇಶವನ್ನು ಸಮರ್ಪಕವಾಗಿ ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.