ದೊಡ್ಡಬಳ್ಳಾಪುರ : ಲಾರಿಗಳ ಸಾಮಾರ್ಥ್ಯಕ್ಕೂ ಹೆಚ್ಚು ಉತ್ಪಾದಿತ ಮರಳು (ಎಂ ಸ್ಯಾಂಡ್) ತುಂಬಿ ಮತ್ತು ಪರ್ಮೀಟ್ ಇಲ್ಲದೆ ಟನ್‌ಗಟ್ಟಲೇ ಜಲ್ಲಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ 5 ಲಾರಿಗಳನ್ನ ತಡೆದ ತಾಲೂಕಿನ ಹಳೆಕೋಟೆ ಗ್ರಾಮಸ್ದರು ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹಳೇಕೋಟೆ ಗ್ರಾಮದ ಸರ್ವೆ ನಂಬರ್ 6ರಲ್ಲಿ ಮೂರು ಕ್ರಷರ್ಗಳು ಕಲ್ಲು ಗಣಿಗಾರಿಕೆ ನಡೆಸುತ್ತಿವೆ. ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ.
ಜನರು ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇದರ ನಡುವೆ ಕ್ರಷರ್‌ನಿಂದ ಜಲ್ಲಿ ಕಲ್ಲು ಮತ್ತು ಎಂ ಸ್ಯಾಂಡ್ ಸಾಗಾಣಿಕೆ ಮಾಡುವ ಲಾರಿಗಳು ಸರ್ಕಾರಿ ನಿಯಮಗಳ ಉಲ್ಲಂಘನೆ ಮಾಡಿ ಸಾಗಾಣಿಕೆ ಮಾಡುತ್ತಿವೆ.
IRC-72 ನಿಯಮದ ಪ್ರಕಾರ 6 ವೀಲ್ ಲಾರಿ 18.5 ಟನ್ ಮತ್ತು 10 ವೀಲ್ ಲಾರಿ 28 ಟನ್ ಮಾತ್ರ ಎಂ ಸ್ಯಾಂಡ್ ಸಾಗಾಣಿಕೆ ಮಾಡಬೇಕು. ಕ್ರಷರ್ ಬಳಿಯೇ ವೇವ್ ಬ್ರಿಡ್ಜ್ ಇದ್ದು, ಅಲ್ಲಿಯೇ ತೂಕ ಮಾಡ ಬೇಕು. ಆದರೆ, ಇದ್ಯಾವುದೇ ನಿಯಮಗಳನ್ನ ಪಾಲನೆ ಮಾಡದೆ 30 ರಿಂದ 35 ಟನ್ ಎಂ ಸ್ಯಾಂಡ್ ಸಾಗಾಣಿಕೆ ಮಾಡಲಾಗುತ್ತಿದೆ.
ಕ್ರಷರ್ ಬಳಿಯ ವೇವ್ ಬ್ರಿಡ್ಜ್ನಲ್ಲಿ ತೂಕ ಮಾಡದೆ ಪರ್ಮೀಟ್ ಪಡೆಯುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನ ವಂಚನೆ ಮಾಡಲಾಗುತ್ತಿದೆ. ಕ್ರಷರ್ ಲಾರಿಗಳ ವಂಚನೆ ವಿರುದ್ದ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ದೂರು ನೀಡಿದರು ಗಣಿ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಸರ್ಕಾರಕ್ಕೆ ರಾಜಧನ ವಂಚಿಸುತ್ತಿದ್ದ ಮತ್ತು ಗ್ರಾಮಸ್ಥರ ನೆಮ್ಮದಿಗೆ ಭಂಗ ತಂದಿದ್ದ 5 ಕ್ರಷರ್ ಲಾರಿಗಳನ್ನ ತಡೆದ ಗ್ರಾಮಸ್ಥರು, ಲಾರಿಗಳನ್ನ ಗಣಿ ಅಧಿಕಾರಿಗಳ ವಶಕ್ಕೆ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.