ನೆಲಮಂಗಲ : ಮದುವೆ ಲಗ್ನ ಪತ್ರಿಕೆಯಲ್ಲಿ ಕರ್ತವ್ಯ ನಿಷ್ಠೆ ಮೆರೆದಿರುವ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬರು ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳನ್ನು ಮುದ್ರಿಸಿ ಜನ ಜಾಗೃತಿ ಮೂಡಿಸುವ ಮೂಲಕ ಮಾದರಿಯಾಗಿದ್ದಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂಲತ: ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದ ಕಾನ್ಸ್‌ಟೇಬಲ್ ಮಂಜುನಾಥ್ ಅವರು ಸಂಚಾರಿ ನಿಯಮಗಳನ್ನು ಒಳಗೊಂಡ ವಿಶೇಷ ಮತ್ತು ವಿನೂತನ ಆಮಂತ್ರಣ ಪತ್ರಿಕೆ ಮುದ್ರಿಸುವ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಜನರ ಪ್ರಶಂಸೆಗೆ ಕಾರಣವಾಗಿದ್ದಾರೆ.
ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮತ್ತು ತುರ್ತು ಸಹಾಯವಾಣಿ 112, ರಸ್ತೆ ಸುರಕ್ಷತಾ ನಿಯಮಗಳು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಇತರೆ ಅಂಶಗಳನ್ನು ಲಗ್ನ ಪತ್ರಿಕೆಯಲ್ಲಿ ಕಾಣಬಹುದಾಗಿದೆ. ಡಿಸೆಂಬರ್ 16 ಹಾಗೂ 17ರಂದು ದಾವಣಗೆರೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಜುನಾಥ್ ಅವರ ವಿವಾಹ ಮಹೋತ್ಸವ ನಡೆಯಲಿದೆ.