ಬೆಂಗಳೂರು: ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ನಾಳೆ ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಿದೆ. ಬೆಂಗಳೂರು ಶಾಸಕರು, ಪರಿಷತ್ ಸದಸ್ಯರು, ಪಾಲಿಕೆ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಬಾರಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ತಿಳಿದು ಬಂದಿಲ್ಲ. ಬೆಂಗಳೂರಿನ ಕಾಂಗ್ರೆಸ್ನ ನಾಲ್ವರು ಶಾಸಕರು ಅನರ್ಹರಾಗಿದ್ದು, ಅವರ ಬೆಂಬಲಿತ ಪಾಲಿಕೆ ಸದಸ್ಯರು ಯಾರ ಪರ ಇರಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಮೈತ್ರಿ ಸರ್ಕಾರ ಪತನದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಬಂಧ ಸಾಕಷ್ಟು ಹಳಸಿದೆ. ಜೆಡಿಎಸ್ ಬಯಸಿದರೂ ಮೇಯರ್ ಆಯ್ಕೆ ವಿಚಾರದಲ್ಲಿ ಜೆಡಿಎಸ್ಅನ್ನು ಬೆಂಬಲಿಸುವ ಆಸಕ್ತಿ ಕಾಂಗ್ರೆಸ್ಗೆ ಈಗ ಇಲ್ಲ. ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಸಾಮರ್ಥ್ಯವಿಲ್ಲದ ಹಿನ್ನೆಲೆ ಸಭೆ ಸೇರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ಸಾಧ್ಯವೇ? ಅಥವಾ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ದಿನೇಶ್ ಗುಂಡೂರಾವ್ ಚಿಂತನೆ ನಡೆಸಿದ್ದಾರೆ. ನಾಳೆಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
ಆರೆಂಟು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಎದುರಾಗಲಿದೆ. ಅಲ್ಪ ಕಾಲಾವಧಿಗೆ ನಮ್ಮವರನ್ನು ಮೇಯರ್ ಮಾಡುವ ಪ್ರಯತ್ನ ಮಾಡುವ ಅಗತ್ಯ ಇದೆಯೇ ಎಂಬುದನ್ನೂ ಚರ್ಚಿಸಲಿದ್ದಾರೆ.
ಸುದ್ದಿಗೋಷ್ಠಿ: ದಿನೇಶ್ ಗುಂಡೂರಾವ್ ಅವರ ವಿರುದ್ಧ ವಾಕ್ಸಮರ ನಡೆಸಿರುವ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ನಿಲುವು ಖಂಡಿಸಿ ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಪ್ರತಿಭಟನೆ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ಎಸ್.ಟಿ.ಸೋಮಶೇಖರ್ ಅವಹೇಳನಕಾರಿ ಹೇಳಿಕೆ ಖಂಡಿಸಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರು ಯಶವಂತಪುರದ ಕೆ.ಎಸ್.ಐ.ಟಿ.ಕಾಲೇಜ್ ಜಂಕ್ಷನ್ನ ರಘುವನಹಳ್ಳಿಯಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲಿದ್ದಾರೆ.
ದೂರು ಸಲ್ಲಿಕೆ: ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಮತ್ತೆ ಚುನಾವಣೆ ಘೋಷಿಸಿದೆ. ಆದರೆ, ನೀತಿ ಸಂಹಿತೆ ಜಾರಿಗೊಳಿಸಲು ನವಂಬರ್ 11ರಂದು ನಿಗದಿಪಡಿಸಿದೆ. ಚುನಾವಣೆ ಘೋಷಿಸಿದ ದಿನಾಂಕವೇ ನೀತಿ ಸಂಹಿತೆ ಜಾರಿ ಮಾಡಬೇಕಿತ್ತು. ಆದರೆ, ಏಕೆ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕರು ದೂರಿದರು. ಈ ಸಂಬಂಧ ನಾಳೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದಾರೆ.