ಬೆಂಗಳೂರು: ವಿಧಾನಸೌಧದಲ್ಲಿಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಶಾಲೆಗಳನ್ನು ಆರಂಭಿಸುವ ಸಂಬಂಧ ಚರ್ಚೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಲೆ ಆರಂಭವಾಗುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶಾಲೆ ಆರಂಭ ಸಂಬಂಧ ಈಗಾಗಲೇ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ್ದು, ಸಲಹೆ ಸೂಚನೆ ಪಡೆದಿದ್ದಾರೆ. ಈ ಸಂಬಂಧ ವರದಿಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಇತರ ರಾಜ್ಯಗಳಲ್ಲೂ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ದಿನಾಂಕ ಪ್ರಕಟಿಸಲಾಗಿದೆ. ಈ ಸಂಬಂಧ ಕರ್ನಾಟಕದಲ್ಲೂ ಶಾಲೆ ಆರಂಭಿಸುವ ಸಂಬಂಧ ಚರ್ಚಿಸಿ ದಿನಾಂಕ ನಿಗದಿಗೊಳಿಸುವ ಸಾಧ್ಯತೆ ಇದೆ.
ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಶಾಲೆಗಳನ್ನು ಆರಂಭಿಸಿದರೆ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೈಗೊಳ್ಳಬೇಕಾದ ಸುರಕ್ಷತಾ ಕ್ರಮ, ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿ ನೀಡುವ ಬಗ್ಗೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗುವುದು. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಶಾಲೆ ಪುನರಾಂಭಿಸುವ ಸಾಧ್ಯತೆ ಬಗ್ಗೆ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಆಫ್ ಲೈನ್ ಜೊತೆಗೆ ಆನ್ ಲೈನ್ ತರಗತಿಯನ್ನೂ ಮುಂದುವರಿಸುವ ಬಗ್ಗೆ, ಹಂತ ಹಂತವಾಗಿ ಶಾಲೆಗಳನ್ನು ನಡೆಸುವುದು ಸೂಕ್ತವೇ ಅಥವಾ 9-12 ನೇ ತರಗತಿವರೆಗೆ ಶಾಲೆ ಪ್ರಾರಂಭಿಸುವುದು ಒಳಿತಾ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪೋಷಕರು, ಉಪನ್ಯಾಸಕರು, ಶಿಕ್ಷಣ ತಜ್ಞರ ನೀಡಿರುವ ಅಭಿಪ್ರಾಯದ ಬಗ್ಗೆ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.