ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಗೋಕಾಕ್ಗೆ ಬಂಪರ್ ಕೊಡುಗೆ ನಿರೀಕ್ಷೆ:
ವಿಧಾನ ಪರಿಷತ್ಗೆ ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡದಿರುವುದಕ್ಕೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರವಾದ ಗೋಕಾಕ್ಗೆ ಬಂಪರ್ ಕೊಡುಗೆ ದೊರೆಯುವ ಸಾಧ್ಯತೆ ಇದೆ. 990 ಕೋಟಿ ರೂ. ಮೊತ್ತದ ಘಟ್ಟ ಬಸವಣ್ಣ ನೀರು ಸರಬರಾಜು ಯೋಜನೆಯ ಡಿಪಿಆರ್ಗೆ ಆಡಳಿತಾತ್ಮಕ ಅನುಮೋದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: MLC election: 15 ಕ್ಷೇತ್ರದಲ್ಲಿ ಭಾರಿ ಅಂತರದಿಂದ ನಾವು ಗೆಲ್ಲುತ್ತೇವೆ.. ಮಾಜಿ ಸಿಎಂ ಬಿಎಸ್ವೈ
ಕೋವಿಡ್ ಮೂರನೇ ಅಲೆ ಎದುರಿಸಲು 317 ಕೋಟಿ ರೂ. ಮೊತ್ತದಲ್ಲಿ ವೈದ್ಯಕೀಯ ಉಪಕರಣ, ಪರಿಕರಗಳ ಖರೀದಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಅನುಮೋದನೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 72 ಕೋಟಿ ರೂ. ಅನುಮೋದನೆ, ಯಾದಗಿರಿ ಜಿಲ್ಲೆಯ ಎಲ್ಲ ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ 1,358 ಕೋಟಿ ರೂ. ಒಪ್ಪಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 145 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಸಚಿವ ಸಂಪುಟದಲ್ಲಿ ಚರ್ಚೆಗೆ ಬರುವ ವಿಷಯಗಳು
* ರಾಜ್ಯದ ಅಣೆಕಟ್ಟುಗಳ ಸಂರಕ್ಷಣೆಗೆ ಪ್ರತ್ಯೇಕ ಸಂಸ್ಥೆ ಸ್ಥಾಪನೆಗೆ ತೀರ್ಮಾನ
*ಆರ್ಎಸ್ಎಸ್ ಅಂಗಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ಗೆ ಬೆಂಗಳೂರಿನ ಹೆಸರಘಟ್ಟ ಬಳಿಯ ಹುರಳಿ ಚಿಕ್ಕನಹಳ್ಳಿಯಲ್ಲಿ 9.32 ಎಕರೆ ಭೂಮಿ ಮಂಜೂರು
*ಕೃಷಿ ಇಲಾಖೆಯಿಂದ ಸಂಚಾರಿ ಆರೋಗ್ಯ ಸಸ್ಯ ವಾಹನಗಳ ಖರೀದಿಗೆ 41 ಕೋಟಿ ಅಂದಾಜು ಮೊತ್ತಕ್ಕೆ ಒಪ್ಪಿಗೆ
*ನಬಾರ್ಡ್ ಪ್ರಾಯೋಜಿತ ಕೃಷಿ ವಿಶ್ವವಿದ್ಯಾನಿಲಯದಲ್ಲಿ 79 ಕೋಟಿ ರೂ. ಸಿವಿಲ್ ಕಾಮಗಾರಿಗೆ ಒಪ್ಪಿಗೆ
*ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ
*ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ 2022ರ ಸಾರ್ವತ್ರಿಕ ರಜೆ ಮತ್ತು ಪರಿಮಿತ ರಜೆಗಳ ಘೋಷಣೆ
*ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 4 ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ 93 ಕೋಟಿ ರೂ. ಅಂದಾಜು ಮೊತ್ತಕ್ಕೆ ಒಪ್ಪಿಗೆ
*ಬೆಳಗಾವಿ, ಕಲ್ಬುರ್ಗಿ, ಕೊಪ್ಪಳ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಒಪ್ಪಿಗೆ
*ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ಮತ್ತು ಸಿಬ್ಬಂದಿ ವಸತಿ ನಿರ್ಮಾಣಕ್ಕೆ 27 ಕೋಟಿ ರೂ.ಗೆ ಒಪ್ಪಿಗೆ