ಬೆಂಗಳೂರು: ಪಠ್ಯ ಪುಸ್ತಕಗಳ ಪಠ್ಯಕ್ರಮ ಬದಲಿಸಲು ಸಾಧ್ಯತೆ ಇದ್ದರೆ ಮಾಡಿಸುತ್ತೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿ ವರದಿಯಂತೆ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಏನಾದ್ರೂ ಬದಲಾವಣೆ ಮಾಡಬೇಕಾ ಎಂಬ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಾದೇಶಿಕತೆಯನ್ನು ಒಳಗೊಂಡಂತೆ ಹೇಗೆ ಬದಲಾವಣೆ ಮಾಡಬೇಕು ಎಂಬ ಕುರಿತು ತಜ್ಞರ ಅಭಿಪ್ರಾಯ ಕೇಳಿ ಸೂಕ್ತ ಬದಲಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಶಿಕ್ಷಣದ ಗುಣಮಟ್ಟ ಸಂಬಂಧ ಪರಿಶೀಲನೆ ನಡೆಸಲು ದೆಹಲಿ ಮತ್ತು ಕೇರಳಕ್ಕೆ ನನ್ನ ನೇತೃತ್ವದಲ್ಲಿಯೇ ನಿಯೋಗ ತೆರಳಿ ಅಧ್ಯಯನ ನಡೆಸಲಿದ್ದೇವೆ. ಎರಡು ವಾರಗಳಲ್ಲಿ ಸಮಯ ನಿಗದಿ ಮಾಡಿ ತೆರಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕನ್ನಡ ಕಡ್ಡಾಯ:
ಸಿಬಿಎಸ್‌ಸಿ, ಐಸಿಎಸ್‌ಸಿಗಳಲ್ಲಿಯೂ ಕನ್ನಡ ಕಡ್ಡಾಯಗೊಳಿಸಲಾಗುವುದು ಎಂದು ಸಚಿವ ಶ್ರೀನಿವಾಸ್ ತಿಳಿಸಿದ್ದಾರೆ. ಅಲ್ಲದೆ, ಕನ್ನಡ ಕಲಿಕೆಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಗ್ರಂಥಪಾಲಕರ ಸಂಬಂಧ ಸೂಕ್ತ ನಿರ್ಧಾರ
ಸಹಾಯಕ ಗ್ರಂಥಪಾಲಕ ಆತ್ಮಹತ್ಯೆಗೆ ಯತ್ನಸಿರುವುದನ್ನು ವಿರೋಧಿಸಿ ನಿನ್ನೆ ನಡೆಸಿದ ಗ್ರಂಥಪಾಲಕರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಗ್ರಂಥಪಾಲಕರು ನಿನ್ನೆ ನನ್ನ ಭೇಟಿ ಮಾಡಿದ್ದಾರೆ, ಅವರಿಗೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದ್ದು, ಆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಆದರೆ ಕೆಲವು ಗ್ರಂಥಾಲಯಗಳು ಆರ್ಡಿಪಿಆರ್ ವ್ಯಾಪ್ತಿಗೆ ಬರುತ್ತಿವೆ. ಆ ವಿಚಾರದ ಬಗ್ಗೆ ಇಲಾಖೆ ಜೊತೆಗೆ ಚರ್ಚೆ ಮಾಡಿ ನಂತರ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸಂಬಂಧ ಪ್ರತಿಕ್ರಿಯಿಸಿದ ಅವರು, ಮತ್ತೆ ಬಸ್ ಪಾಸ್ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸುತ್ತೇನೆ. ಮುಖ್ಯಮಂತ್ರಿಗಳು ಏನು ತೀರ್ಮಾನ ಮಾಡುತ್ತಾರೋ ಅದೇ ರೀತಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.