ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡಲು ಬಂದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಖದೀಮ, ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ನಗರದ ನ್ಯಾಷನಲ್ ಕಾಲೇಜು ಬಳಿ ಇರುವ ಅಶೋಕ್ ಎಂಬವರ ಮನೆಗೆ ದೀಪಾವಳಿ ದಿನ ಮನೆ ಶುಚಿಗೊಳಿಸಲು ಸಂಬಂಧಿಕರ ಪರಿಚಯಸ್ಥನಾದ ಕುಶಾಲ್ ಸಿಂಗ್ ಎಂಬವನನ್ನ ಕರೆಸಿದ್ದಾರೆ. ಪರಿಚಯಸ್ಥನಾಗಿರುವ ಕಾರಣ ಕುಶಾಲ್ ಸಿಂಗ್ಗೆ ಮನೆ ಶುಚಿಗೊಳಿಸಲು ಹೇಳಿ ಮನೆಯವರೆಲ್ಲರೂ ಚಿಕ್ಕಪೇಟೆಗೆ ತೆರಳಿದ್ದರು.
ಆದರೆ ಕುಶಾಲ್ ಸಿಂಗ್ ಮನೆ ಶುಚಿಗೊಳಿಸುವ ವೇಳೆ ಲಾಕರ್ನ ಕೀ ಸಿಕ್ಕಿದ್ದು, ಲಾಕರ್ನಲ್ಲಿದ್ದ ಒಂದು ಕೆಜಿ ಚಿನ್ನಾಭರಣ ಮತ್ತು 250 ಗ್ರಾಂ ಬೆಳ್ಳಿ ದೋಚಿದ್ದಾನೆ. ಕುಟುಂಬಸ್ಥರು ಮನೆಗೆ ವಾಪಸ್ ಬರುವಷ್ಟರಲ್ಲಿ ಮನೆ ಕ್ಲೀನ್ ಮಾಡಿ, ಅನುಮಾನ ಬಾರದ ಹಾಗೆ ಕೀ ಅಲ್ಲೇ ಇಟ್ಟಿದ್ದಾನೆ. ಬಳಿಕ ಯಶವಂತಪುರಕ್ಕೆ ಹೋಗಿ ಅಲ್ಲಿಂದ ರೈಲಿನಲ್ಲಿ ಜೈಪುರಕ್ಕೆ ಎಸ್ಕೇಪ್ ಆಗಿದ್ದಾನೆ. ಮನೆಯವರೆಲ್ಲಾ ಬಂದು ಪೂಜೆಗೆಂದು ಆಭರಣ ತೆಗೆಯಲು ಲಾಕರ್ ಓಪನ್ ಮಾಡಿದಾಗ ಕಳ್ಳತನವಾಗಿರೋದು ತಿಳಿದು ಬಂದಿದೆ. ತಕ್ಷಣ ಮನೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ.
ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇದೀಗ ಪೊಲೀಸರು, ಜೈಪುರಕ್ಕೆ ತೆರಳಿ ಆರೋಪಿ ಕುಶಾಲ್ ಸಿಂಗ್ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ 38 ಲಕ್ಷ ಬೆಲೆಬಾಳುವ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.