ಬೆಂಗಳೂರು: ನಗರದ ಉತ್ತರಹಳ್ಳಿ ಬಳಿ ಇರುವ ವಿನಯ್ ಅವದೂತರ ಆಶ್ರಮಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ಗೆ ಸಿಹಿ ಸುದ್ದಿಯೊಂದು ಲಭಿಸಿದೆ ಎಂದು ಹೇಳಲಾಗ್ತಿದೆ.
ಹೌದು, ವಿನಯ್ ಅವದೂತ ಗುರೂಜಿಯನ್ನು ಡಿಕೆಶಿ ಗುರುವಾರ ಭೇಟಿಯಾಗಿದ್ರು. ಗುರೂಜಿ ಜೊತೆ ಡಿಕೆಶಿ ಮುಕ್ಕಾಲು ಗಂಟೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭವಿಷ್ಯ ನುಡಿದ ವಿನಯ್ ಅವದೂತರು, ನಿಮ್ಮ ಮುಂದೆ ಮತ್ತೆ ಎರಡು ಕಷ್ಟಗಳು ಬರಲಿವೆ. ಹಾಗೆಯೇ ಅದನ್ನು ನಿವಾರಿಸಿಕೊಂಡರೆ ಎರಡು ಹುದ್ದೆಗಳು ನಿಮಗೆ ಸಿಗಲಿವೆ. ಆ ಕಷ್ಟಗಳ ಮಧ್ಯೆಯೇ ಒಂದು ಹುದ್ದೆ ಸಿಕ್ಕರೂ ಸಿಗಬಹುದು ಎಂದಿದ್ದಾರೆ.
ಇನ್ನೊಂದು ದೊಡ್ಡ ಹುದ್ದೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿದ ಮೇಲೆ ಸಿಗಲಿದೆ. ಮತ್ತೆ ಎರಡು ಕಷ್ಟಗಳು ಮುಂದೆ ಬರಲಿವೆ. ನಾನು ನಿಮ್ಮಿಂದ ಯಾವುದನ್ನೂ ನಿರೀಕ್ಷಿಸದೇ ಮಾತನ್ನು ಈ ಹೇಳುತ್ತಿದ್ದೇನೆ ಎಂದು ಡಿಕೆಶಿಗೆ ಅಭಯ ನೀಡಿದ್ದಾರೆ.
ಜೈಲಿಗೆ ಹೋಗುವ ಮುನ್ನ ಡಿಕೆಶಿ ಕುರಿತು ಭವಿಷ್ಯ ನುಡಿದಿದ್ದ ವಿನಯ್ ಅವದೂತರು, ನಿಮಗೆ ಎದುರಾಗಿರುವ ಸಂಕಷ್ಟವನ್ನು ಯಾರಿದಂಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದರು. ಅವದೂತರು ಭವಿಷ್ಯ ನುಡಿದಿದ್ದ 15-20 ದಿನಗಳಲ್ಲೇ ಡಿಕೆಶಿಗೆ ಸಂಕಷ್ಟ ಶುರುವಾಗಿತ್ತು. ಈಗ ಮತ್ತೆ ಡಿಕೆಶಿಗೆ ಕೆಲ ಸಂಕಷ್ಟ ಮತ್ತು ಹುದ್ದೆಯ ಭವಿಷ್ಯ ಒಟ್ಟಿಗೆ ನೀಡಿರುವ ವಿನಯ್ ಅವದೂತರು ಸದ್ಯದ ಮಟ್ಟಿಗೆ ಡಿಕೆಶಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಕೈ ನಾಯಕರ ಭೇಟಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾಜಿ ಮೇಯರ್ಗಳಾದ ಪದ್ಮಾವತಿ, ಗಂಗಾಂಬಿಕಾ ಮಲ್ಲಿಕಾರ್ಜುನ, ಸಂಪತ್, ಮಾಜಿ ಡೆಪ್ಯೂಟಿ ಮೇಯರ್ ಭದ್ರೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಯಾಗಿ ಘೋಷಿತವಾಗಿರುವ ಎಂ. ಶಿವರಾಜ್ ಇದೇ ಸಂದರ್ಭ ಹಾಜರಿದ್ದರು.
ಇದಾದ ಬಳಿಕ ಬೆನ್ನು ನೋವು, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಶಿವಕುಮಾರ್ ಆಸ್ಪತ್ರೆಗೆ ತೆರಳಿ ತಪಾಸಣೆ ಬಳಿಕ ಒಳಗಾಗಿ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.