ಬೆಂಗಳೂರು: ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧ ಮಾಡಿದ್ರು ಕೂಡ ಸಿಲಿಕಾನ್ ಸಿಟಿಯಲ್ಲಿ ತ್ರಿವಳಿ ತಲಾಖ್ ಘಟನೆ ಬೆಳಕಿಗೆ ಬಂದಿದೆ.
ಆರ್.ಟಿ ನಗರದ ನಿವಾಸಿ ಟೆಕ್ಕಿ ಮಹಮ್ಮದ್ ಜಾಕೀರ್ 2008 ರಲ್ಲಿ ಮದುವೆಯಾಗಿ ಮೊದಲು ಸುಖಕರ ಜೀವನ ನಡೆಸುತ್ತಿದ್ದರು. ಆದರೆ ಐವಿಎಫ್ ಚಿಕಿತ್ಸೆ ಮೂಲಕ ಪತ್ನಿಗೆ ಗಂಡು ಮಗು ಜನನವಾದ ನಂತರ ಮಹಮ್ಮದ್ ಜಾಕೀರ್ ಮನೆಯವರು ಮಾನಸಿಕ ಕಿರುಕುಳ ಜೊತೆಗೆ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರಂತೆ. ಐವಿಎಫ್ ಚಿಕಿತ್ಸೆ ಮೂಲಕ ಜನನವಾದ ಮಗು ಹೃದಯ ಸಂಬಂಧಿ ಖಾಯಿಲೆಯಿಂದ ಮರಣ ಹೊಂದಿದ ಕಾರಣ ಮಹಮ್ಮದ್ ಜಾಕೀರ್ ಹಾಗೂ ಆತನ ಕುಟುಂಬದವರು ಬೇರೆ ಮದುವೆ ಮಾಡಲು ನಿರ್ಧಾರ ಮಾಡಿದ್ದು, ಹೀಗಾಗಿ ತಲಾಖ್ ನೋಟಿಸ್ ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಸಂತ್ರಸ್ತೆ ನ್ಯಾಯ ಕೊಡಿಸುವಂತೆ ತಲಾಖ್ ನೋಟಿಸ್ ಹಿಡಿದು ಆರ್.ಟಿ.ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದ್ರೆ ಪೊಲೀಸರು ಮಾತ್ರ ವಂಚನೆ ಕೇಸ್ ಹಾಕಿ ಪತಿ ಜಾಕೀರ್‌ನ ವಿರುದ್ಧ ಕ್ರಮ ಕೈಗೊಳ್ಳದೇ ಸತಾಯಿಸಿದ್ದಾರೆಂದು ಆರೋಪಿಸಿ, ಕಮಿಷನರ್ ಭಾಸ್ಕರ್ ರಾವ್ ಅವರನ್ನ ಭೇಟಿಯಾಗಿ ನೋವು ತೋಡಿಕೊಂಡಿದ್ದಾರೆ. ಸದ್ಯ ಭಾಸ್ಕರ್ ರಾವ್ ಅವರು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.
ಮತ್ತೊಂದೆಡೆ ಜಾಕೀರ್ ಸಂತ್ರಸ್ತೆಯನ್ನ ಮದುವೆಯಾಗುವ ಮೊದಲೇ ಇನ್ನೊಂದು ಮದುವೆಯಾಗಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.