ಬೆಂಗಳೂರು : ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಜಾನುವಾರು ಸಾಕಣೆಯಲ್ಲಿ ತೊಡಗಿದವರಿಗೆ ಮಾರ್ಗದರ್ಶನ ನೀಡಲು ಸುಸಜ್ಜಿತವಾದ ವಾರ್ ರೂಮ್ ಅನುಷ್ಠಾನಗೊಳ್ಳಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಜಾನುವಾರು ಸಾಕಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡಲು ಸುಸಜ್ಜಿತವಾದ ವಾರ್ ರೂಮ್ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ತಯಾರಾಗಿದ್ದು, ರೈತರು, ಜಾನುವಾರು ಸಾಕಾಣೆದಾರರು, ಪ್ರಾಣಿ ಪ್ರಿಯರು ಇದರ ಅನುಕೂಲ ಪಡೆಯಬಹುದಾಗಿದೆ ಎಂದು ಸಚಿವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಜಾನುವಾರುಗಳ ಆರೋಗ್ಯ, ಸಾಕುವ ವಿಧಾನ, ಆರೋಗ್ಯ ಸಮಸ್ಯೆ, ತಕ್ಷಣಕ್ಕೆ ಚಿಕಿತ್ಸೆ, ಔಷಧೋಪಚಾರ ಇತ್ಯಾದಿಗಳ ಬಗ್ಗೆ ವಿಷಯ ತಜ್ಞರು ವಾರ್ ರೂಮ್ ಮೂಲಕ ಮಾಹಿತಿ ನೀಡಲಿದ್ದಾರೆ. ವಾರ್ ರೂಮ್, ದಿನದ 24 X 7 ಕಾರ್ಯನಿರ್ವಹಿಸಲಿದ್ದು, Disaster Management Control Centre (DMCC) (ವಿಪತ್ತು ನಿರ್ವಹಣಾ ನಿಯಂತ್ರಣ ಕೇಂದ್ರವು (ವಾರ್ ರೂಮ್) ) ಪಶುಸಂಗೋಪನೆ ಇಲಾಖೆಯ 4,212 ಸಂಸ್ಥೆಗಳು, 2,900 ಪಶುವೈದ್ಯರು ಮತ್ತು 2,200 ಪಶುವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಸೇವೆ ಒದಗಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರತಿಕ್ರಿಯ ತಂಡವು ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ವಾರ್ ರೂಮ್ ಗೆ ಕರೆ ಬಂದ ಕೆಲವೇ ಗಂಟೆಗಳಲ್ಲಿ ತಂಡ ಮಾಹಿತಿ ಆಧಾರದ ಮೇಲೆ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಹಾರ ನೀಡಲಿದೆ ಎಂದು ವಿವರಿಸಿದ್ದಾರೆ.
ವಾರ್ ರೂಮ್ ವೈಶಿಷ್ಠ್ಯತೆಗಳು
- ದಿನದ 24 ಗಂಟೆ ಸೇವೆ ಲಭ್ಯವಾಗಲಿದೆ. ಟೋಲ್ ಫ್ರೀ ನಂಬರ್ ವ್ಯವಸ್ಥೆ ಒಳಗೊಂಡಿದೆ.
- ಪಶುಸಂಗೋಪನಾ ಕ್ಷೇತ್ರದಲ್ಲಿನ ಅಧುನಿಕ ವಿಧಾನಗಳ ಬಗ್ಗೆ ಇ-ಮೇಲ್, ಹತ್ತಿರದ ಪಶುವೈದ್ಯ ಸಂಸ್ಥೆ, ಮುದ್ರಿತ ಪ್ರತಿ, ಆಡಿಯೋ ವಿಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ರೈತರಿಗೆ ನಿರಂತರವಾಗಿ ಮಾಹಿತಿ ನೀಡುವುದು.
- ಇಲಾಖೆಯಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳುವ ರೈತರ ಮೊಬೈಲ್ಗೆ ಪಶುಗಳಿಗೆ ನೀಡಲಾಗುವ ಲಸಿಕೆ, ರೋಗೊದ್ರೇಕ ಸಾಧ್ಯತೆ ಬಗ್ಗೆ ಮಾಹಿತಿ ನೀಡುವುದು.
- ಜಾನುವಾರುಗಳಿಗೆ ಚಿಕಿತ್ಸೆ ಅವಶ್ಯಕತೆ ಇದ್ದ ರೈತರ ವಾರ್ ರೂಮ್ ಸಂಪರ್ಕಿಸಿದಾಗ ಹತ್ತಿರದ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸುವುದು.
- ಬಿಡಾಡಿ ದನ ಹಾಗೂ ಇತರ ಪ್ರಾಣಿಗಳ ಬಗ್ಗೆ ಸಾರ್ವಜನಿಕರು ನೀಡುವ ದೂರು ಆಧರಿಸಿ ಹತ್ತಿರದ ಪಶುವೈದ್ಯರು ಚಿಕಿತ್ಸೆ ನೀಡುವಂತೆ ನೋಡಿಕೊಳ್ಳುವುದು.
- ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ವಿವರ, ಅವುಗಳನ್ನು ಪಡೆಯಲು ಬಳಸಬೇಕಾದ ಪ್ರಕ್ರಿಯೆ, ಡೈರಿ, ಹಂದಿ ಸಾಕಣೆ, ಮೇಕೆ, ಕೋಳಿ ಇತ್ಯಾದಿಗಳ ಸಾಕಾಣಿಕೆ ವಿವರ ನೀಡುವುದು.
- ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೋಂದಾಯಿತ ರೈತರ ಮೋಬೈಲ್ಗೆ ಎಸ್.ಎಮ್.ಎಸ್ ಅಲರ್ಟ್ ನೀಡುವುದು
- ವಿವಿಧ ಜಾನುವಾರುಗಳ ಮಾರುಕಟ್ಟೆ ಲಭ್ಯತೆ, ದರಗಳ ಕುರಿತು ಮಾಹಿತಿ ನೀಡುವುದು.
- ಸ್ಥಳಿಯ/ವಿದೇಶಿ ಪಶು ತಳಿಗಳ ಬಗ್ಗೆ ಮಾಹಿತಿ ನೀಡುವುದು.
- ಬ್ಯಾಂಕ್ಗಳಿಂದ ಸಾಲದ ಸೌಲಭ್ಯದ ಮಾಹಿತಿ ನೀಡುವುದು
- ಮೇವಿನ ಉತ್ಪಾದನೆ, ಮೇವಿನ ಬೀಜಗಳ ಕಿಟ್ ಕುರಿತು ಮಾಹಿತಿ ನೀಡುವುದು.
- ತಂತ್ರಜ್ಞಾನ ಬಳಸಿ ಗೋಶಾಲೆಗಳ ನಿರ್ವಹಣೆ ಮತ್ತು ಮಾಹಿತಿ ನೀಡುವುದು
- ಗೋಹತ್ಯೆ ಪ್ರತಿಬಂಧಕ ಕಾಯ್ದೆ ಅನುಷ್ಟಾನದ ಕುರಿತಾಗಿ ಸಾರ್ವಜನಿಕರಿಂದ ಬರುವ ದೂರುಗಳನ್ನು ಆಯಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
- ಪಶುಸಂಜೀವಿನಿ, ಆ್ಯಂಬುಲೇಟರಿ ಕ್ಲಿನಿಕ್ಗಳನ್ನು ತಜ್ಞ ವೈದ್ಯರೊಂದಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು.
- ತಜ್ಞರೊಂದಿಗೆ ಜಾನುವಾರುಗಳ ಆರೋಗ್ಯ, ಆಹಾರ, ಔಷಧಿಗಳ ಕುರಿತು ಸಂವಹನ ನಡೆಸುವ ವ್ಯವಸ್ಥೆ
- ಚಿಕಿತ್ಸಾಲಯಗಳಲ್ಲಿ ವೈದ್ಯರ ಲಭ್ಯತೆಯನ್ನು ತಂತ್ರಜ್ಞಾನ ಆಧಾರಿತವಾಗಿ ತಿಳಿಸುವ ವ್ಯವಸ್ಥೆ.
- ಲಭ್ಯ ತಂತ್ರಜ್ಞಾನ ಬಳಸಿ ವಿವಿಧ ಮಾಧ್ಯಮಗಳ ಮೂಲಕ ರೈತರಿಗೆ ಮಾಹಿತಿ ತಲುಪಿಸುವುದು ಹಾಗೂ ರೈತರಿಗೆ ಅವರ ಕುಂದುಕೊರತೆಗಳ ಬಗ್ಗೆ ದೂರವಾಣಿ ಮೂಲಕ ನೀಡುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸಿ ಸೂಕ್ತ ಪರಿಹಾರವನ್ನು ಒದಗಿಸುವುದು.