ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿರುಸಿನ ತನಿಖೆ ನಡೆಸುತ್ತಿದೆ. ಈಗಾಗಲೇ ಪ್ರಮುಖ ರಾಜಕೀಯ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದು, ಇದೀಗ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ನಡುಕ ಉಂಟಾಗಿದೆ.
ಪೂರ್ವ ವಿಭಾಗದ ಡಿಸಿಪಿಯಾಗಿದ್ದ ವೇಳೆ ಅಜಯ್ ಹಿಲೋರಿ ಕೂಡ ಮನ್ಸೂರ್ ಅಕ್ರಮದಲ್ಲಿ ಕೈ ಜೋಡಿಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿಬಿಐ ನಿನ್ನೆ ಅವರನ್ನು ವಿಚಾರಣೆಗೆ ಕರೆದಿತ್ತು ಎನ್ನಲಾಗಿದೆ. ಆದರೆ, ಅಜಯ್ ಹಿಲೋರಿ ವಿಚಾರಣೆಗೆ ಹಾಜರಾಗಿಲ್ಲ. ಇಂದು ವಿಚಾರಣೆಗೆ ಹಾಜರಾಗುವ ಎಲ್ಲ ಸಾಧ್ಯತೆಗಳಿದ್ದು, ಒಂದು ವೇಳೆ ಸಿಬಿಐ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ಹೋದರೆ ಬಂಧನ ಖಚಿತವಾಗಿದೆ.
ಹಾಗೆಯೇ ಹೇಮಂತ್ ನಿಂಬಾಳ್ಕರ್ಗೆ ಕೂಡ ಸಿಬಿಐ ನಡುಕ ಶುರುವಾಗಿದೆ. ಈಗಾಗಲೇ ಸಿಬಿಐ, ಐಪಿಎಸ್ ಅಧಿಕಾರಿಗಳಾದ ಅಜಯ್ ಹಿಲೋರಿ, ಹೇಮಂತ್ ನಿಂಬಾಳ್ಕರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಏನಿದು ಪ್ರಕರಣ?
ಐಎಂಎ ಜನರಿಗೆ ವಂಚನೆ ಮಾಡುತ್ತಿರುವ ವಿಚಾರ ತಿಳಿದು 2016 ಆಗಸ್ಟ್ 12 ರಂದು ಡಿಜಿಪಿಗೆ ಪತ್ರ ಬರೆಯಲಾಗಿತ್ತು. ಜೊತೆಗೆ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ, ಡಿಸಿಪಿ ಅಜಯ್ ಹಿಲೋರಿ, ಕಮರ್ಷಿಯಲ್ ಇನ್ಸ್ಪೆಕ್ಟರ್ ರಮೇಶ್ ಹಾಗೂ ಇತರ ಸಿಬ್ಬಂದಿ ಸರಿಯಾದ ತನಿಖೆ ನಡೆಸದೇ ಪ್ರಕರಣ ಮುಚ್ಚಿ ಹಾಕಿದ್ದರು. ಸಿಐಡಿ ವರ್ಗಾವಣೆಯಾದ ತದನಂತರ ಪ್ರಕರಣವನ್ನು 2019 ಜನವರಿ 1ರಂದು ಕ್ಲೀನ್ಚಿಟ್ ಕೊಟ್ಟು ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರು ಡಿಜಿಗೆ ಯಾವುದೇ ತಪ್ಪು ನಡೆದಿಲ್ಲ ಎಂದು ದಾಖಲೆ ನೀಡಿದ್ದರು.
ಆದರೆ, ಐಎಂಎ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆಯೇ ಕೋಟಿ ಕೋಟಿ ವಂಚನೆಯಾಗಿರುವುದು ತಿಳಿದು ಬಂದಿದೆ. ಸದ್ಯಕ್ಕೆ ಸಿಬಿಐ ತನಿಖೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ನಿಂದ ಪೊಲೀಸ್ ಅಧಿಕಾರಿಗಳು ಹಣ ಪಡೆದಿರುವುದು ಬಯಲಾಗಿದೆ. ಹೀಗಾಗಿ ಸಿಬಿಐ ಮತ್ತಷ್ಟು ತನಿಖೆ ಮುಂದುವರೆಸಿದೆ.