ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬೆಂಗಳೂರು ಮಹಾನಗರ ವ್ಯಾಪ್ತಿಯ ಕಾಂಗ್ರೆಸ್ ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಸದಸ್ಯರು, ಮಾಜಿ ಸದಸ್ಯರು, ಸಂಸದರು, ಬೆಂಗಳೂರು ಮುಖಂಡರ ಸಭೆ ನಡೆಸಿದ್ದೇವೆ. ಈಗಾಗಲೇ 243 ವಾರ್ಡ್ ಮಾಡಲಾಗಿದೆ. ಬಿಬಿಎಂಪಿ ಚುನಾವಣೆ ಬೇಗ ನಡೆಸಬೇಕು. ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದೇವೆ. ಹಿಂದೆ ಬಿಜೆಪಿಯವರು 8,500 ಕೋಟಿ ರೂ. ಸಾಲ ಹೊರಿಸಿದ್ದರು. ಟಿಡಿಆರ್ ಹಗರಣ ಮಾಡಿ ಹೋಗಿದ್ದರು. ಈಗ ಜನರ ಮೇಲೆ ಒಂದೊಂದೇ ತೆರಿಗೆ ಹಾಕುತ್ತಿದ್ದಾರೆ. ಚುನಾವಣೆ ಅನ್ನುವ ಕಾರಣಕ್ಕೆ ಘನ ತ್ಯಾಜ್ಯದ ಮೇಲಿನ ಕೇಸನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಇವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ತಕ್ಷಣ ಅದನ್ನು ಜಾರಿಗೆ ತರುತ್ತಾರೆ ಎಂದರು.
ಕೋವಿಡ್ನಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಹೈದರಾಬಾದ್ನಲ್ಲಿ ಶೇ. 50ರಷ್ಟು ತೆರಿಗೆ ಕಡಿಮೆ ಮಾಡಲಾಗಿದೆ. ಇಲ್ಲೂ ಅದೇ ರೀತಿ ಟ್ಯಾಕ್ಸ್ ಕಟ್ ಮಾಡಬೇಕು. ಮನೆ ಕಟ್ಟುವವರಿಗೆ ತೀವ್ರ ತೊಂದರೆಯಾಗಿದೆ. ಕಸ ಹಾಕುವವರಿಗೂ ತೊಂದರೆಯಾಗಿದೆ. ಕಸದ ಮೇಲೆ ಟ್ಯಾಕ್ಸ್ ಹೆಚ್ಚಳ ಮಾಡುತ್ತಿದ್ದಾರೆ. ಬಿಬಿಎಂಪಿ ಕೆಲಸಗಳು ನೆನೆಗುದಿಗೆ ಬಿದ್ದಿವೆ. 18 ವಾರ್ಡ್ಗೆ ಚುನಾವಣೆ ನಡೆಸಿದರೂ ಸರಿ, 243 ವಾರ್ಡಿಗೆ ಚುನಾವಣೆ ನಡೆಸಿದರೂ ಎದುರಿಸಲು ನಾವು ಸಿದ್ಧಿರಿದ್ದೇವೆ ಎಂದರು.
ಪಕ್ಷದ ನಾಯಕರು ಬಿಬಿಎಂಪಿ ಕಚೇರಿಗೆ ಮೆರವಣಿಗೆ ತೆರಳಿ ಅಲ್ಲಿ ಪ್ರತಿಭಟಿಸುತ್ತೇವೆ. ಕಳೆದ ಒಂದು ವರ್ಷದಲ್ಲಿ ಬಿಬಿಎಂಪಿ ನಡೆಸಿದ ಅವ್ಯವಹಾರ ಹಾಗೂ ಹಗರಣಗಳ ಕುರಿತು ಜನರ ಗಮನ ಸೆಳೆಯುವ ಕಾರ್ಯ ಮಾಡುತ್ತೇವೆ ಎಂದರು.