ಬೆಂಗಳೂರು: ಅಂತಾರಾಷ್ಟ್ರೀಯ ಹಾಗೂ ಹೈ ರಿಸ್ಕ್ ರಾಜ್ಯಗಳಿಂದ ಬೆಂಗಳೂರಿಗೆ ಮರಳುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೋಮ್ ಕ್ವಾರಂಟೈನ್ಗೆ ಅವಕಾಶ ಕೊಡುವಂತೆ ಸರ್ಕಾರದ ಜೊತೆ ಮಾತುಕತೆ ನಡೆಸಿ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದರು.
ಇಂದು ಸಂಜೆ 6 ಗಂಟೆಗೆ ಮುಖ್ಯಕಾರ್ಯದರ್ಶಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಯಲಿದ್ದು, ಸರ್ಕಾರ ಅಧಿಕೃತವಾಗಿ ಇನ್ನು ಮುಂದೆ ಹೋಮ್ ಕ್ವಾರಂಟೈನ್ ಮಾತ್ರ ಎಂದು ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.
ಸ್ಟಾರ್ ಹೋಟೆಲ್ಗಳಿಗೆ ಕ್ವಾರಂಟೈನಿಗಳನ್ನು ಕಳಿಸಲಾಗುತ್ತಿದೆ, ಇದರ ವೆಚ್ಚ ಭರಿಸಲು ಪ್ರಯಾಣಿಕರಿಗೆ ಕಷ್ಟ ಎಂಬ ದೂರುಗಳೂ ಕೇಳಿಬಂದಿವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಸ್ಟಾರ್ ಹೋಟೆಲ್ಗಳಲ್ಲಿ ಕೆಲಸಗಾರರು ಇದ್ದಾರೆ. ಆದರೆ ಬಜೆಟ್ ಹೋಟೆಲ್ಗಳಲ್ಲಿ ಕೆಲಸಗಾರರು, ಅಡುಗೆಯವರು ಇಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದ್ದು ಸರ್ಕಾರದ ಗಮನಕ್ಕೂ ತರಲಾಗಿದೆ ಎಂದರು.
ಇನ್ನು ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಅಲ್ಲಿನ ಸ್ಯಾಂಪಲ್ಗಳು ಕೂಡ ಬೆಂಗಳೂರಿಗೆ ಬಂದು ಟೆಸ್ಟ್ ಆಗುತ್ತಿವೆ. ಹೀಗಾಗಿ ನಗರದ ರಿಪೋರ್ಟ್ ಬರುವುದು ವಿಳಂಬವಾಗಿ ಹೋಟೆಲ್ ಕ್ವಾರಂಟೈನ್ ಅವಧಿ ಮುಂದೂಡಿಕೆಯಾಗುತ್ತಿದೆ. ಪಾಸಿಟಿವ್ ಆಗಿದ್ರೆ ಮಾತ್ರ ಕೂಡಲೇ ಮಾಹಿತಿ ನೀಡಲಾಗುವುದು. ತಡವಾದ ಪಕ್ಷದಲ್ಲಿ ಅದು ನೆಗೆಟಿವ್ ಎಂದು ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಕೂಡ ಕೋವಿಡ್ ಟೆಸ್ಟ್ ಹೆಚ್ಚಾಗುತ್ತಿದೆ. ನಿನ್ನೆಯೂ ಕೂಡ 53 ವಿಮಾನಗಳು ಬಂದಿವೆ. ರೈಲಿನಲ್ಲಿ ಕೂಡ ಜನ ಬರುತ್ತಿದ್ದಾರೆ. ಇದೆಲ್ಲದರಿಂದ ಕ್ವಾರಂಟೈನ್ ಮಾಡಲು ರೂಮ್ಗಳು ಸಿಗುತ್ತಿಲ್ಲ, ಕಳ್ಳದಾರಿಯಿಂದ ಬೆಂಗಳೂರು ಪ್ರವೇಶಿಸಿದರೆ ಜೈಲು ಸೇರುವುದು ಗ್ಯಾರಂಟಿ, ಈಗಾಗಲೇ ಬೆಂಗಳೂರಿಗೆ ಬೇರೆ ಬೇರೆ ದಾರಿಗಳಿಂದ ಪ್ರವೇಶ ಮಾಡಿ, ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗದಿದ್ದರೆ ಎಫ್ಐಆರ್ ದಾಖಲಿಸಿ, ಜೈಲಿಗೆ ಹಾಕುವ ಸಾಧ್ಯತೆಯಿದೆ. ಈಗಾಗಲೇ ರೆಸಿಡೆನ್ಸಿ ವೆಲ್ಫೇರ್ ಅಸೋಸಿಯೇಷನ್ ನೀಡಿರುವ ದೂರುಗಳ ಪ್ರಕಾರ 80 ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.
ಲಾಕ್ಡೌನ್ 4.0 ಬಳಿಕ ಪಾಲಿಕೆ ನಡೆಗಳು?
ಮಾಲ್, ದೇವಸ್ಥಾನ, ಸಿನಿಮಾ ಹಾಲ್, ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ತೆರೆಯಲು ಅವಕಾಶ ಮಾಡಿ ಕೊಟ್ಟರೆ ಪಾಲಿಕೆ ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಸಿದ್ಧತೆ ನಡೆಸಿದೆ. ಎಸಿ ಬಳಸಬಾರದು, ಹೆಚ್ಚಿನ ನೈರ್ಮಲ್ಯ ಕಾಪಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಮತ್ತು ಬಾರ್, ಪಬ್ಗಳನ್ನು ಮೇಲ್ವಿಚಾರಣೆ ಮಾಡಲು ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.