ಬೆಂಗಳೂರು: ಹಗಲಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿ ರಾತ್ರಿಯ ವೇಳೆ ದೇವಸ್ಥಾನಗಳ ಹುಂಡಿ ಹಣವನ್ನು ಕದಿಯುತ್ತಿದ್ದ ಅಸ್ಸೋಂ ಮೂಲದ ವ್ಯಕ್ತಿಯೋರ್ವನನ್ನು ಮಾರತಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವೈಟ್ಫೀಲ್ಡ್ ನಿವಾಸಿಯಾಗಿರುವ ಅಬುಲ್ ಫಜಲ್ ಅಹ್ಮದ್ (22) ಬಂಧಿತ ಆರೋಪಿ. ಕಳೆದ ಮೂರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾನೆ. ಜೀವನಕ್ಕಾಗಿ ನಗರದ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ಹಿಡಿದ ಈತ ದೇವಸ್ಥಾನಗಳ ಹುಂಡಿಯಲ್ಲಿನ ಹಣ ದೋಚುವ ಕೆಲಸ ಮಾಡುತ್ತಿದ್ದ ಎನ್ನಲಾಗ್ತಿದೆ.
ಇತ್ತೀಚೆಗೆ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಮ್ಮ ದೇವಸ್ಥಾನದ ಹುಂಡಿಯಲ್ಲಿ ಹುಂಡಿ ಹಣ ದೋಚಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸಬ್ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ವಿಚಾರಣೆ ವೇಳೆ ನಗರದ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಸದ್ದುಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯ ಮಾರಮ್ಮ ದೇವಸ್ಥಾನ, ಆಡುಗೋಡಿಯ ಮಾರಮ್ಮ ದೇವಸ್ಥಾನ, ವೈಟ್ಫೀಲ್ಡ್ ಬಳಿಯ ಮಾರಮ್ಮ ದೇವಸ್ಥಾನ, ಮಾರತಹಳ್ಳಿಯ ಮಾರಮ್ಮ ದೇವಸ್ಥಾನದಲ್ಲಿ ಈತ ತನ್ನ ಕೈಚಳಕ ತೋರಿಸಿದ್ದಾನೆ.
ಓದಿ: ಚಿಕ್ಕಮಗಳೂರು: ಕಂದಕಕ್ಕೆ ಉರುಳಿದ ಖಾಸಗಿ ಬಸ್, 5 ಪ್ರಯಾಣಿಕರು ಗಂಭೀರ