ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯದ ಕುರಿತು ಕಮಲ ಪಡೆಯಿಂದ ನಡೆಯುತ್ತಿರುವ ಪಾಲಿಟಿಕ್ಸ್ಗೆ ಕಾವಿ ಪಡೆ ಎಂಟ್ರಿಯಾಗಿದೆ. ಬಿಎಸ್ವೈ ಪರ ವಿರೋಧಿ ನಾಯಕರು ಹೇಳಿಕೆ ನೀಡುತ್ತಿರುವಂತೆ ಮಠಾಧೀಶರ ವಲಯದಿಂದಲೂ ಪರ-ವಿರೋಧದ ಹೇಳಿಕೆ ಕೇಳಿ ಬಂದಿವೆ. ರಾಜಕೀಯದಲ್ಲಿ ಸನ್ಯಾಸಿಗಳ ಪ್ರವೇಶ ಕುತೂಹಲ ಮೂಡಿಸಿದೆ.
ರಾಜ್ಯ ಬಿಜೆಪಿಯಲ್ಲಿ ತಲೆದೂರಿರುವ ಬಣ ರಾಜಕೀಯ, ನಾಯಕತ್ವ ಬದಲಾವಣೆ ವದಂತಿಗೆ ತೆರೆ ಎಳೆಯಲು ಹೈಕಮಾಂಡ್ ಪ್ರತಿನಿಧಿಯಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿ, ಪರ-ವಿರೋಧ ಇರುವವರ ಅಹವಾಲು ಆಲಿಸುತ್ತಿದ್ದಾರೆ. ಆದರೆ, ಈ ಎಲ್ಲಾ ಬೆಳವಣಿಗೆಗಳ ನಡುವೆ ಒಂದು ಪಕ್ಷದ ಆಂತರಿಕ ವಿಚಾರದಲ್ಲಿ ಮಠಾಧೀಶರು ಪ್ರವೇಶಿಸಿ ಹೊಸ ಟ್ವಿಸ್ಟ್ಗೆ ಕಾರಣರಾಗಿದ್ದಾರೆ.
ಯಡಿಯೂರಪ್ಪ ಅವರನ್ನು ಬದಲಾಯಿಸಬಾರದು ಎಂದು ಹಲವು ಮಠಾಧೀಶರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೆ ಮತ್ತೆ ಕೆಲವರು ಬಿಜೆಪಿ ಉಸ್ತುವಾರಿಯನ್ನೇ ಭೇಟಿಯಾಗಿ ನಾಯಕತ್ವ ಬದಲಾವಣೆ ಬೇಡಿಕೆ ಇರಿಸಿದ್ದಾರೆ. ಮಠಾಧೀಶರಾದವರು ಮುಖ್ಯಮಂತ್ರಿಯನ್ನು ಬದಲಿಸಿ ಎನ್ನುವ ಹಕ್ಕೊತ್ತಾಯ ಮಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ ವದಂತಿ ಹರಡುತ್ತಿದ್ದಂತೆ ವೀರಶೈವ ಲಿಂಗಾಯತ ಸಮುದಾಯದ ಕೆಲ ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಲು ಆರಂಭಿಸಿದ್ದಾರೆ.
ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಕೋವಿಡ್ ಸಂಕಷ್ಟದಲ್ಲಿ ನಾಯಕತ್ವ ಬದಲಾವಣೆ ಸರಿಯಲ್ಲ. ಯಡಿಯೂರಪ್ಪ ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಜನ ಸಾವು-ನೋವಿನ ಸಂಕಷ್ಟದಲ್ಲಿ ಇರುವಾಗ ಅಧಿಕಾರಕ್ಕಾಗಿ ಕಿತ್ತಾಟ ಸರಿಯಲ್ಲ. ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಹೈಕಮಾಂಡ್ ನಿರ್ಣಯಕ್ಕೆ ನಮ್ಮ ಬೆಂಬಲ ಇದೆ ಎಂದಿದ್ದಾರೆ.
ಶಿಕಾರಿಪುರ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಶಿವಮೊಗ್ಗದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಗ್ರಾಜೇಂದ್ರ ಶ್ರೀಗಳು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಿದರೆ ತಮ್ಮ ತಲೆ ಮೇಲೆ ತಾವೇ ಮೇಲೆ ಕಲ್ಲು ಹಾಕಿಕೊಂಡಂತಾಗಲಿದೆ. ಪಕ್ಷಕ್ಕೆ ದೊಡ್ಡ ಮಟ್ಡದ ಹಾನಿಯಾಗಲಿದೆ. ಹಾಗಾಗಿ, ನಾಯಕತ್ವ ಬದಲಾವಣೆ ಆಗಬಾರದು ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಯಡಿಯೂರಪ್ಪ ಕೇವಲ ಲಿಂಗಾಯತ ಸಮುದಾಯದ ನಾಯಕರಲ್ಲ, ಅವರು ಸರ್ವ ಜನಾಂಗದ ನಾಯಕ. ನಾಲ್ಕು ದಶಕದ ಹೋರಾಟದ ಫಲವಾಗಿ ಸಿಎಂ ಆಗಿದ್ದಾರೆ. ಈಗ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ಸರ್ವನಾಶವಾಗಲಿದೆ ಎಂದು ಕಲಬುರ್ಗಿಯಲ್ಲಿ ಸುಲಫಲ ಮಠದ ಸಾರಂಗಧರ ಸ್ವಾಮೀಜಿ ಹೇಳಿದ್ದಾರೆ.
ತಿಪಟೂರಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನ ಬದಲಾಯಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಒಂದು ಕಡೆ ವೀರಶೈವ ಲಿಂಗಾಯತ ಸ್ವಾಮೀಜಿಗಳು ನಿರಂತರವಾಗಿ ಯಡಿಯೂರಪ್ಪ ಪರ ಹೇಳಿಕೆ ನೀಡುತ್ತಿದ್ದರೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಾಯಕತ್ವ ಬದಲಾವಣೆ ಆಗಬೇಕು ಎಂದಿದ್ದಾರೆ. ಇತರ ಶ್ರೀಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಸುಮ್ಮನಾಗಿದ್ದರೆ ಪಂಚಮಸಾಲಿ ಶ್ರೀಗಳು ಕಳೆದ ರಾತ್ರಿ ಕುಮಾರಕೃಪಾ ಅತಿಥಿಗೃಹಕ್ಕೆ ತೆರಳಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ರನ್ನು ಭೇಟಿ ಮಾಡಿದರು.
ನಾಯಕತ್ವ ಬದಲಾವಣೆ ನಿರ್ಧಾರ ತೆಗೆದುಕೊಂಡರೆ ಅದನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಅಲ್ಲದೇ ತಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಬೇಡಿಕೆ ಮುಂದಿಟ್ಟಿದ್ದಾರೆ. ಮಠಾಧೀಶರು ರಾಜಕೀಯ ಪಕ್ಷಕ್ಕೆ ಹಾಗೂ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಬೇಕಾದವರಾಗಿದ್ದು, ಅವರೇ ಈಗ ಪಕ್ಷವೊಂದರ ಆಂತರಿಕ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು, ಕೆಳಗೆ ಇಳಿಸುವುದು ಶಾಸಕರಾಗಿದ್ದು, ಶಾಸಕಾಂಗದ ಪಕ್ಷದ ಅಧಿಕಾರವನ್ನು ಮಠಾಧೀಶರೇ ಚಲಾಯಿಸಲು ಹೊರಡಿರುವುದು ವಿಪರ್ಯಾಸ.