ಬೆಂಗಳೂರು: ಕಲಾಪ ಮುಂದೂಡಿಕೆ ಮಾಡಿದ್ದ ಸಭಾಪತಿ ನಿರ್ಧಾರ ಕುರಿತು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದ ವಿಷಯ ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿತು.
ಸುರೇಶ್ ಕುಮಾರ್ ಹೆಸರು ತೆಗೆಯದೆ ಟ್ವೀಟ್ ವಿಷಯ ಪ್ರಸ್ತಾಪಿಸಿ ಯಾರೂ ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದು ಬೇಡ ಎಂದು ಸಭಾಪತಿ ಸೂಚನೆ ನೀಡಿದರೂ ಯಾಕೆ ಚರ್ಚೆ ಬೇಡ ಎನ್ನುವ ವಿಷಯದ ಮೇಲೆಯೇ ಅರ್ಧ ಗಂಟೆ ಕಾಲ ಚರ್ಚೆ ನಡೆಯಿತು.
ಕಳೆದ ಬಾರಿ ನಡೆದ ಅಧಿವೇಶನದ ಕಡೆಯ ದಿನ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದನ್ನು ಟೀಕಿಸುವ ರೀತಿಯಲ್ಲಿ ಸಚಿವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ನಾನು ಪತ್ರದ ಮೂಲಕ ಸಿಎಂ ಯಡಿಯೂರಪ್ಪ ಹಾಗು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಗಮನಕ್ಕೆ ತಂದಿದ್ದೇನೆ. ಇದು ಸದಸ್ಯರ ಗಮನಕ್ಕೆ ಇರಲಿ ಎಂದು ಮಾಹಿತಿ ಹಂಚಿಕೊಂಡಿದ್ದೇನೆ. ಈ ವಿಷಯದ ಮೇಲೆ ಚರ್ಚೆ ಮಾಡದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮನವಿ ಮಾಡಿದರು.
ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಎದುರಿಸಲು ಸಿದ್ಧ, ತಾಲೂಕು ಕೇಂದ್ರದಲ್ಲೂ ಚಿಕಿತ್ಸೆ: ಸಚಿವ ಸುಧಾಕರ್
ಸಭಾಪತಿಗಳ ನಡೆಗೆ ಬಿಜೆಪಿ ಸದಸ್ಯ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಸದನದ ಹೊರಗಿನ ಪ್ರಶ್ನೆಗೆ ಪೀಠದ ಬಗ್ಗೆ ಬಂದ ಹೇಳಿಕೆಗೆ ಉತ್ತರ ನೀಡಿದ ಪರಂಪರೆ ಇರಲಿಲ್ಲ, ಹೊಸ ಪರಂಪರೆಗೆ ಸಭಾಪತಿಗಳು ನಾಂದಿ ಹಾಡಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿಗಳು, ಚರ್ಚೆ ಬೇಡ ಎಂದು ಮತ್ತೊಮ್ಮೆ ಸಲಹೆ ನೀಡಿದರು. ಪೀಠದ ಮೇಲೆ ಠೀಕೆ ಮಾಡಿದ್ದರು, ಹಾಗಾಗಿ ಅದಕ್ಕೆ ಎಲ್ಲಿ ಉತ್ತರ ಕೊಡಬೇಕೋ ಕೊಟ್ಟಿದ್ದೇನೆ, ಇಲ್ಲಿ ಸೂಕ್ಷ್ಮವಾಗಿ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದರು. ಇದಕ್ಕೆ ಸುಮ್ಮನಾಗದ ರವಿಕುಮಾರ್ ಯಾವ ನಿಯಮದ ಅಡಿ ಉತ್ತರ ನೀಡಿದ್ದೀರಿ ಎಂದು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಕಿಡಿಕಾರಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾದ ಪ್ರತಿವಾದ ನಡೆಯಿತು. ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದಿದ್ದೀರಿ ಅದಕ್ಕೆ ನಮ್ಮ ಸಹಮತ ಇದೆ. ಆದರೆ ಯಾವ ನಿಯಮ ಎಂದು ಕೇಳುತ್ತಿದ್ದಾರೆ. ಇಲ್ಲಿಂದ ಮುಂದೆ ಚರ್ಚೆಗೆ ಪೀಠದ ಅನುಮತಿ ಬೇಕು, ಸದನ ನ್ಯಾಯಾಲಯದಂತೆ, ನ್ಯಾಯಾಂಗ ನಿಂದನೆಯಾದಾಗ ಸ್ವಯಂ ನೋಟಿಸ್ ನೀಡಿ ಉತ್ತರ ಪಡೆಯಲಾಗುತ್ತದೆ. ಅದೇ ರೀತಿ ನಡೆದುಕೊಳ್ಳಿ. ನೀವು ಕೂಡ ಇಲ್ಲಿನ ಸದನದ ನ್ಯಾಯಾಧೀಶರಂತೆ, ಗೌರವಕ್ಕೆ ಧಕ್ಕೆ ಬರುವಂತೆ ಇಲ್ಲವೇ, ನಿಂದನಾತ್ಮಕ ಹೇಳಿಕೆ ನೀಡಿದ್ದರೆ ನ್ಯಾಯಾಂಗ ನಿಂದನೆ ರೀತಿಯಲ್ಲೇ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಧಾನಸಭಾ ಕಲಾಪದಲ್ಲಿ ಸಚಿವರ ಗೈರು: ಸ್ಪೀಕರ್ ಅಸಮಾಧಾನ
ಸದನದಲ್ಲಿ ವಾಕ್ಸಮರದ ಬಿಸಿ ಹೆಚ್ಚಾಗುತ್ತಿದ್ದನ್ನು ಗಮನಿಸಿದ ಸಭಾಪತಿಗಳು ನಿಮಯ 342 ಅಡಿ ಉತ್ತರ ಕೊಟ್ಟಿದ್ದೇನೆ ಎಂದು ಪ್ರಕಟಿಸಿ, ಚರ್ಚೆಗೆ ಅವಕಾಶ ನೀಡಿಲ್ಲ ಕುಳಿತುಕೊಳ್ಳಿ ಎಂದು ರವಿಕುಮಾರ್ಗೆ ಸೂಚನೆ ನೀಡಿ ಚರ್ಚೆಗೆ ತೆರೆ ಎಳೆದರು.
ಅಂತಿಮವಾಗಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ತಿನಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಬಂದ ಸಂದರ್ಭ ಬಹಳ ಕಡಿಮೆ ಇದೆ. ಆದರೂ ಬಿಲ್ಗಳು ತಿರಸ್ಕಾರ ಆಗಿದ್ದು ಬಹಳ ಕಡಿಮೆ. ಸುರೇಶ್ ಕುಮಾರ್ ಹಿರಿಯರು, ತಮ್ಮ ಆತಂಕವನ್ನು ಟ್ವೀಟ್ ಮೂಲಕ ಪ್ರತಿಕ್ರಿಯೆ ಮಾಡಿದ್ದರು. ಇದಕ್ಕೆ ಸಭಾಪತಿಗಳ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ. ಸರ್ಕಾರದ ಬಿಲ್ ತಿರಸ್ಕಾರ ಮಾಡುತ್ತಾ ಹೋದರೆ ಸರ್ಕಾರ ನಡೆಸುವುದು ಹೇಗೆ? ಆ ಹಿನ್ನಲೆಯಲ್ಲಿ ಸುರೇಶ್ ಕುಮಾರ್ ಅಸಮಾಧಾನ ತೋಡಿಕೊಂಡಿರಬಹುದು. ಚರ್ಚೆ ಬೇಡ ಎನ್ನುವುದಕ್ಕೆ ಸಹಮತವಿದೆ, ಯಾವುದೇ ಪಕ್ಷವಾದರೂ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಬಿಲ್ಗಳನ್ನು ಪರಿಷತ್ನಲ್ಲಿ ತಿರಸ್ಕಾರ ಮಾಡುವುದರಿಂದ ಸರ್ಕಾರ ನಡೆಸಲು ಬಹಳ ಕಷ್ಟ ಎಂದು ಸುರೇಶ್ ಕುಮಾರ್ ಅಭಿಪ್ರಾಯವನ್ನು ಸಮರ್ಥಿಸಿಕೊಂಡರು.