ಬೆಂಗಳೂರು: ವಕೀಲರೊಬ್ಬರ ವಿರುದ್ಧ ಮಾನಹಾನಿ ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಧಿಸಿದ್ದ ಶಿಕ್ಷೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ಜೈಲು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.
ಹೈಕೋರ್ಟ್ ತೀರ್ಪು ರದ್ದು ಕೋರಿ ಪತ್ರಕರ್ತ ವಿಶ್ವನಾಥ ಶೆಟ್ಟಿ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣವಿಲ್ಲ.
ಪತ್ರಕರ್ತರಾಗಿ ಮಾಡಿರುವ ಪದಬಳಕೆ ಗಮನಿಸಿದರೆ, ನಿಮಗೆ ವಿಧಿಸಿರುವ ಶಿಕ್ಷೆ ಪ್ರಮಾಣ ಕೂಡ ದೊಡ್ಡದಲ್ಲ ಎಂದು ಅಭಿಪ್ರಾಯಟ್ಟಿದೆ. ಅಲ್ಲದೇ, ಶಿಕ್ಷೆ ಅವಧಿ ಪೂರೈಸಲು ಎರಡು ವಾರಗಳಲ್ಲಿ ವಿಚಾರಣಾ ನ್ಯಾಯಾಲಯದ ಎದುರು ಹಾಜರಾಗುವಂತೆ ಶೆಟ್ಟಿ ಅವರಿಗೆ ನಿರ್ದೇಶಿಸಿದೆ.
ತುಂಗಾ ವಾರ್ತೆ ವಾರಪತ್ರಿಕೆಯ ಡಿ.ಎಸ್ ವಿಶ್ವನಾಥ ಶೆಟ್ಟಿ ಎಂಬುವರು ವಕೀಲ ಟಿ.ಎನ್ ರತ್ನಾಕರ್ ಎಂಬುವರ ವಿರುದ್ಧ ಮಾನಹಾನಿ ಲೇಖನ ಪ್ರಕಟಿಸಿದ್ದರು. ಈ ಸಂಬಂಧ ರತ್ನಾಕರ್ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ 6 ಲಕ್ಷ ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ 1 ತಿಂಗಳು ಜೈಲು ಹಾಗೂ 50 ಸಾವಿರ ದಂಡ ವಿಧಿಸಿತ್ತು. ಈ ಆದೇಶ ರದ್ದು ಕೋರಿ ಶೆಟ್ಟಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
(ಇದನ್ನೂ ಓದಿ: 'ಏನಪ್ಪಾ ನಿನ್ ಜತೆ ಹೊಂದಿಕೆಯಿಂದಿದ್ದರೇ ಇನ್ನೂ 2 ವರ್ಷ ನಾನೇ ಸಿಎಂ ಆಗಿರ್ತಿದ್ದೆ..' ಯತ್ನಾಳ್ ಎದುರು ಬಿಎಸ್‌ವೈ ಅಸಹಾಯಕತೆ..)