ಬೆಂಗಳೂರು: ಭ್ರಷ್ಟಾಚಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ವ್ಯಕ್ತಪಡಿಸಿರುವ ಅಭಿಪ್ರಾಯಗಳ ವಿರುದ್ಧ ಎಸಿಬಿ ಎಡಿಜಿಪಿಯಾಗಿರುವ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಹಾಗು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರು ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ಸಂದೇಶ್ ಅವರು ತಮ್ಮ ವಿರುದ್ಧ ವ್ಯಕ್ತಪಡಿಸಿರುವ ಕಟುವಾದ ಅಭಿಪ್ರಾಯಗಳ ಸಿಂಧುತ್ವವನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಕಳೆದ ಶುಕ್ರವಾರ ವಿಚಾರಣೆ ನಡೆಸಿದ ಕೋರ್ಟ್, ಇಬ್ಬರ ಅರ್ಜಿಗಳನ್ನು ಸೋಮವಾರ ಒಟ್ಟಿಗೆ ವಿಚಾರಣೆ ನಡೆಸುವ ಇಂಗಿತ ವ್ಯಕ್ತಪಡಿಸಿತ್ತು. ಅದರಂತೆ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.
ಸೀಮಂತ್ ಕುಮಾರ್ ಸಿಂಗ್ ಪರವಾಗಿ ಹಿರಿಯ ವಕೀಲ ಅಮಿತ್ ಕುಮಾರ್ ಅರ್ಜಿ ಸಲ್ಲಿಸಿ, ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ತಮ್ಮ ಕಕ್ಷಿದಾರರ ವಿರುದ್ಧ ಮಾಡಿರುವ ಟೀಕೆಗಳನ್ನು ರದ್ದುಪಡಿಬೇಕೆಂದು ಮನವಿ ಮಾಡಿದ್ದಾರೆ. ಹಲವು ವರ್ಷಗಳ ಉತ್ತಮ ಅನುಭವ ಹೊಂದಿರುವ ಎಸಿಬಿ ಮುಖ್ಯಸ್ಥರ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿಗಳು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯು ಸಲ್ಲಿಸಿರುವುದು ಜಾಮೀನು ಅರ್ಜಿ ಮಾತ್ರ. ಆದರೆ, ನ್ಯಾಯಮೂರ್ತಿಗಳು ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತೆ ಪರಿಗಣಿಸಿ ವಿಚಾರಣೆ ನಡೆಸಿದ್ದಾರೆ. ತಮ್ಮ ಹಾಗೂ ತಮ್ಮ ನೇತೃತ್ವದ ಎಸಿಬಿ ಸಂಸ್ಥೆಯ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ. ತಮ್ಮ ಸೇವಾ ವರದಿಯನ್ನು ಸಲ್ಲಿಸಲು ಕೋರಿರುವುದು ಸಹ ಜಾಮೀನು ಅರ್ಜಿಯ ವ್ಯಾಪ್ತಿಯ ಹೊರಗಿದೆ" ಎಂದು ಸೀಮಂತ್ ಕುಮಾರ್ ಸಿಂಗ್ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರು ಭ್ರಷ್ಟಾಚಾರ ಪ್ರಕರಣದ ಆರೋಪಿಗೆ ಸಂಬಂಧಿಸಿದ ಜಾಮೀನು ಅರ್ಜಿಯಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಉಲ್ಲೇಖಿಸಿರುವ ಕ್ರಮವನ್ನು ಪ್ರಶ್ನಿಸಿ ನ್ಯಾಯಮೂರ್ತಿಗಳ ಟೀಕೆ ಟಿಪ್ಪಣಿಗಳನ್ನು ರದ್ದುಪಡಿಸಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್