ಬೆಂಗಳೂರು: ಮೀಸಲು ಹೆಚ್ಚಳಕ್ಕೆ ಒತ್ತಾಯಿಸಿ, ಪ್ರತಿಭಟನೆ ನಡೆಸುತ್ತಿದ್ದ ವಾಲ್ಮೀಕಿ ಸಮುದಾಯದವರ ಜತೆ ಇಂದು ಸಿಎಂ ಕುಮಾರಸ್ವಾಮಿ ಖಾಸಗಿ ಹೋಟೆಲ್ನಲ್ಲಿ ತುರ್ತು ಸಭೆ ನಡೆಸಿದರು.
ವಾಲ್ಮೀಕಿ ಸಮುದಾಯದ ಮುಖಂಡರಾದ ಸಚಿವ ಸತೀಶ್ ಜಾರಕಿಹೊಳಿ, ಸಚಿವ ತುಕಾರಾಂ ನೇತೃತ್ವದ ನಿಯೋಗದಲ್ಲಿ ವಿ.ಎಸ್. ಉಗ್ರಪ್ಪ, ಕಂಪ್ಲಿ ಗಣೇಶ್, ನಾಗೇಶ್, ಪ್ರತಾಪ್ ಗೌಡ ಪಾಟೀಲ್ ಸೇರಿ ಹಲವರು ಉಪಸ್ಥಿತರಿದ್ದರು. ವಾಲ್ಮೀಕಿ ಸಮುದಾಯಕ್ಕೆ ಮೀಸಲು ಹೆಚ್ಚಿಸುವ ಬಗ್ಗೆ ವಿ.ಎಸ್. ಉಗ್ರಪ್ಪ ಅವರು ಸಿಎಂಗೆ ವಿವರಣೆ ನೀಡಿದರು.
ಸಮುದಾಯಕ್ಕೆ ಈಗಾಗಲೇ ಶೇ. 3 ರಷ್ಟು ಮೀಸಲಾತಿ ಇದೆ. 7.5 ರಷ್ಟು ಮೀಸಲಾತಿ ಕಲ್ಪಿಸುವುದು ಅತ್ಯಗತ್ಯ. ಜನಸಂಖ್ಯೆ ಆಧಾರದಲ್ಲಿ ಶೇ. 7.5. ರಷ್ಟು ಹೆಚ್ಚಳ ಮಾಡಬೇಕೆಂದು ಸಿಎಂ ಕುಮಾರಸ್ವಾಮಿ ಅವರಿಗೆ ಸಮುದಾಯದ ಮುಖಂಡರು ಮನವರಿಕೆ ಮಾಡಿಕೊಟ್ಟರು.
ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಡಿಸಿಎಂ ಪರಮೇಶ್ವರ್ ಕೂಡ ಉಪಸ್ಥಿತರಿದ್ದರು. ನಂತರ ಸಮುದಾಯ ಮುಖಂಡರೊಂದಿಗೆ ಡಿಸಿಎಂ ಪರಮೇಶ್ವರ್ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಸಭೆಯ ವಿಚಾರಗಳ ಬಗ್ಗೆ ತಿಳಿಸಿದರು.